ಹಾವೇರಿ : ವ್ಯಕ್ತಿವೋರ್ವ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿಯ ಚಿಕ್ಕಲಿಂಗದಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 45 ವರ್ಷದ ಹಾವೇರಪ್ಪ ಮಾಗೋಡ ಎಂದು ಗುರುತಿಸಲಾಗಿದೆ.
ಮೃತ ದೇಹ ಚಿಕ್ಕಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತ ಹಾವೇರಪ್ಪ ಮತ್ತು ಅವನ ಪತ್ನಿ 38 ವರ್ಷದ ಮುತ್ತಕ್ಕ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಹಾವೇರಪ್ಪನನ್ನ ಮುತ್ತಕ್ಕನೇ ಕೊಲೆ ಮಾಡಿಸಿದ್ದಾಳೆ ಎಂದು ಹಾವೇರಪ್ಪನ ಸಂಬಂಧಿಕರು ಆರೋಪಿಸಿದ್ದಾರೆ.
ಈ ಕೊಲೆಗೆ ಮುತ್ತಕ್ಕಳ ಅನೈತಿಕ ಸಂಬಂಧವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಈ ಕುರಿತಂತೆ ಮಾತನಾಡಿದ ಹಾವೇರಪ್ಪನ ಪತ್ನಿ ಮುತ್ತಕ್ಕ, ತನ್ನ ಗಂಡ ಒಳ್ಳೆಯವನಾಗಿದ್ದ. ನಿನ್ನೆ ದೂರವಾಣಿಯಲ್ಲಿ ಸಹ ಮಾತನಾಡಿದ್ದಾನೆ. ಈಗ ಹೆಣವಾಗಿ ಸಿಕ್ಕಿರುವುದು ತನಗೆ ಸಹ ಅನುಮಾನವನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಬಸು ಚೌವ್ಹಾಣ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.