ರಾಣೆಬೆನ್ನೂರು: ಕೋವಿಡ್-19ನಿಂದ ಮೃತಪಟ್ಟರೆ ಕುಟುಂಬದ ಸದಸ್ಯರೇ ಶವ ಮುಟ್ಟಲು ಹಿಂಜರಿಯುವ ಪರಿಸ್ಥಿತಿಯಲ್ಲಿ, ನಗರದ ಮುಸ್ಲಿಂ ಯುವಕರ ತಂಡವೊಂದು ಕೊರೊನಾದಿಂದ ಮೃತಪಟ್ಟ ಮತ್ತು ಅನಾಥ ಶವಗಳ ಅಂತ್ಯಸಂಸ್ಕಾರವನ್ನ ಸ್ವಯಂ ಪ್ರೇರಿತವಾಗಿ ನೆರವೇರಿಸುತ್ತಿದ್ದಾರೆ.
ಹೌದು, ನಗರದ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆ ಯುವಕರು ಇಂತಹ ಒಂದು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಯಾವುದೇ ಧರ್ಮ, ಜಾತಿ, ಮತ ನೋಡದೆ ಸ್ವಯಂಪ್ರೇರಿತರಾಗಿ ಶವ ಸಂಸ್ಕಾರದಲ್ಲಿ ತೊಡಗಿದ್ದಾರೆ. ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಈ ಸಂಘಟನೆ ಯುವಕರು ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಇವರ ಮಾನವೀಯ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನಗರದಲ್ಲಿ ಸಂಘಟನೆ ಯುವಕರಾದ ಶೋಹೆಬ್, ಇರ್ಫಾನ್, ಫೈರೋಜ್, ಜಹೀರ್ ಅಹ್ಮದ್ ಲಾಕ್ಡೌನ್ ವಿಧಿಸಿದ ದಿನದಿಂದ ಹಿಡಿದು ಇಲ್ಲಿಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊರೊನಾ ಮಾರಣಾಂತಿಕ ವೈರಸ್ ಆಗಿ ಪರಿಣಮಿಸಿದ್ದರಿಂದ ಎಲ್ಲರಿಗೂ ಭಯ ಉಂಟು ಮಾಡಿದೆ. ಅದರಲ್ಲೂ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರು ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹದರಲ್ಲಿ ಧರ್ಮ, ಜಾತಿ ನೋಡದೆ ಜಿಲ್ಲಾ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಡಿ ಅಂತ್ಯಕ್ರಿಯೆ ಮಾಡುತ್ತಿರುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಫಜಲ್ ಖಾನ್ ತಿಳಿಸಿದ್ದಾರೆ.
ಸದ್ಯ ಈ ಯುವಕರು 9 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಲ್ಲೂ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಈಗಾಗಲೇ ಕೊರೊನಾದಿಂದ ಸಾವನ್ನಪ್ಪಿದ ಆರು ಜನರನ್ನು ಅವರವರ ಧರ್ಮದ ಸಂಪ್ರದಾಯಗಳ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ. ಸದ್ಯ ಈ ಯುವಕರ ತಂಡ ಯಾವುದೇ ಜಾತಿ, ಧರ್ಮ ಅನ್ನದೆ ಕೆಲಸ ಮಾಡುತ್ತಿದ್ದು, ಇವರಿಗೆ ಸೂಕ್ತವಾದ ಪಿಪಿಇ ಕಿಟ್, ಮಾಸ್ಕ್ಗಳು ಹಾಗೂ ಸ್ಯಾನಿಟೈಸರ್ ಬೇಕಿವೆ. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ನೀಡಬೇಕು ಎನ್ನುತ್ತಾರೆ ಯುವಕರು.
ಒಟ್ಟಿನಲ್ಲಿ ಯುವಕರು ಅಂತ್ಯಕ್ರಿಯೆ ಮಾಡಿದ್ದಕ್ಕೆ ಸರ್ಕಾರದಿಂದ ಅಥವಾ ಜನರಿಂದ ಯಾವುದೇ ರೀತಿಯಲ್ಲಿ ಹಣ ಪಡೆಯವುದಿಲ್ಲ. ಆದರೆ ಸ್ವಯಂಪ್ರೇರಿತವಾಗಿ ತಾವೇ ಮುಂದೆ ಬಂದು ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.