ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಭೂ ಪರಿಹಾರಕ್ಕೆ ಆಗ್ರಹಿಸಿ ರೈತರು ಧರಣಿ ನಡೆಸುತ್ತಿದ್ದ ವೇಳೆ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜಿಲ್ಲೆಯ ರಾಣೆಬೆನ್ನೂರು ಹೊರವಲಯದ ತುಂಗಾ ಮೇಲ್ದಂಡೆ ಯೋಜನಾ ಕಚೇರಿ ಬಳಿ ಇಂದು ಈ ಘಟನೆ ನಡೆದಿದೆ. ಹಿರೇಕೆರೂರು ತಾಲೂಕಿನ ಮೇದೂರು ಗ್ರಾಮದ ನಾಗರಾಜ ತಳವಾರ ಆತ್ಮಹತ್ಯೆಗೆ ಯತ್ನಿಸಿದ ರೈತ.
ಈತ ಕಚೇರಿ ಆವರಣದಲ್ಲಿನ ಮರಕ್ಕೆ ಹಗ್ಗ ಕಟ್ಟಿ ಆತ್ಮಹತ್ಯೆಗೆ ಮುಂದಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಮತ್ತು ಸ್ಥಳೀಯ ರೈತರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾಗರಾಜ ಸಾಲದ ಸುಳಿಯಲ್ಲಿ ಸಿಲುಕಿ ಜೀವನವೇ ಸಾಗಿಸಲು ಕಷ್ಟವಾಗಿದೆಯಂತೆ. ಈ ನಡುವೆ ಇದ್ದ ಭೂಮಿ ಕೂಡಾ ತುಂಗಾ ಮೇಲ್ದಂಡೆ ಕಾಲುವೆಗೆ ಹೋಗಿದೆ. ಇತ್ತ ಸರ್ಕಾರ ಕೂಡ ಪರಿಹಾರ ನೀಡದೆ ಇರುವುದರಿಂದ ಸಾಲದ ಸುಳಿಗೆ ಬಿದ್ದಿದ್ದೇನೆಂದು ರೈತ ಕಣ್ಣೀರು ಹಾಕಿದ್ದಾನೆ.