ಹಾವೇರಿ : ರಂಗಪಂಚಮಿ ಬಂದರೆ ಸಾಕು ರತಿ ಮನ್ಮಥರದೇ ಮಾತು. ಕೆಲವು ಕಡೆ ಕಟ್ಟಿಗೆಯಲ್ಲಿ ಮಾಡಿದ ರತಿ-ಮನ್ಮಥರನ್ನು ಪ್ರತಿಷ್ಠಾಪಿಸಿದರೆ, ಇನ್ನೂ ಕೆಲವು ಕಡೆಗಳಲ್ಲಿ ಬಟ್ಟೆ ಮತ್ತು ಭತ್ತದ ಹುಲ್ಲಿನಿಂದ ಮಾಡಿದ ಕಾಮಣ್ಣನನ್ನು ಪ್ರತಿಷ್ಠಾಪಿಸುತ್ತಾರೆ.
ಆದರೆ ಜಿಲ್ಲೆಯಲ್ಲಿ ಇದಕ್ಕಿಂತ ವಿಭಿನ್ನವಾದ ಆಚರಣೆಯೊಂದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಜೀವಂತ ರತಿ-ಕಾಮಣ್ಣ(ರತಿ-ಮನ್ಮಥ) ನನ್ನು ಕೂರಿಸಲಾಗುತ್ತದೆ. ಕೂರಿಸಿದ ಕಾಮ-ರತಿಯನ್ನು ನಗಿಸಬೇಕು ಎನ್ನುವ ಸವಾಲನ್ನು ಪ್ರೇಕ್ಷಕ ಮುಂದೆ ಇಡಲಾಗುತ್ತದೆ. ಈ ರೀತಿ ಕಳೆದ 10 ವರ್ಷಗಳಿಂದ ಜೀವಂತ ಕಾಮ-ರತಿ ಪದ್ಧತಿ ಆಚರಣೆಯಲ್ಲಿದ್ದು, ರಾಣೆಬೆನ್ನೂರು ನಗರದ ಹಲವು ಕಡೆಗಳಲ್ಲಿ ಇದು ನಡೆದುಕೊಂಡು ಬಂದಿದೆ.
ಕೂರಿಸಿದ ಕಾಮ-ರತಿಯನ್ನು ನಗಿಸಿದವರಿಗೆ ನಿರ್ದಿಷ್ಟ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ. ವಿಚಿತ್ರ ಎಂದರೆ ಕಳೆದ 10 ವರ್ಷಗಳಲ್ಲಿ ಜೀವಂತ ಕಾಮರತಿಯರನ್ನು ನಗಿಸಿದ ಉದಾಹರಣೆಗಳಿಲ್ಲ. ಕಾಮ-ರತಿಯನ್ನು ನಗಿಸಲು ಬಂದವರೇ ನಗೆಪಾಟಲಿಗೀಡಾಗುತ್ತಾರೆ. ಕಾಮ-ರತಿಯ ಮುಂದೆ ಸಿನಿಮಾ ಡೈಲಾಗ್, ಮಿಮಿಕ್ರಿ, ಹಾಡು ಹಾಸ್ಯ ಚಟಾಕಿ ಸಿಡಿಸಿದರೂ ಅವರು ನಗುವುದಿಲ್ಲ. ಇಲ್ಲಿ ಕುಳಿತ ಕಾಮ-ರತಿಯನ್ನು ಬೆಂಗಳೂರಿಗೆ ಕರೆಸಿ ನಗಿಸಲು ಪ್ರಯತ್ನಿಸಲಾಗಿತ್ತಾದರೂ, ಅದು ಯಶಸ್ವಿಯಾಗಿಲ್ಲ.
ಕಳೆದ 10 ವರ್ಷದಿಂದ ಜೀವಂತ ಕಾಮನಾಗಿ ಸೀಮಿಕೇರಿ ಗೂರಣ್ಣ ಮತ್ತು ರತಿಯಾಗಿ ಲೈಂಗಿಕ ಅಲ್ಪಸಂಖ್ಯಾತೆ ತನುಶ್ರೀ ಬೆಂಗಳೂರು ಅಭಿನಯಿಸುತ್ತಿದ್ದಾರೆ. ಇವರಿಗಾಗಿ ವಿಶೇಷವಾದ ಆಸನ ಸಿದ್ಧಪಡಿಸಲಾಗುತ್ತದೆ. ಅದರ ಮೇಲೆ ರತಿ ಕಾಮಣ್ಣ ಕುಳಿತರೇ ಮುಗಿಯಿತು. ಎಂತಹ ಹಾಸ್ಯಕ್ಕೂ ಇವರು ನಗುವುದಿಲ್ಲ. ಜೀವಂತ ಕಾಮ-ರತಿ ನಗಿಸಲು ಬಂದವರು ಸಭಿಕರಿಗೆ ನಗಿಸಲು ಅಷ್ಟೇ ಶಕ್ಯರಾಗುತ್ತಾರೆ. ಆದರೆ ಜೀವಂತ ಕಾಮ-ರತಿಯನ್ನು ನಗಿಸುವಲ್ಲಿ ಸ್ಪರ್ಧಾರ್ಥಿಗಳು ವಿಫಲರಾಗುತ್ತಾ ಬಂದಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.
ಓದಿ : 'ಕಾಶ್ಮೀರಿ ಫೈಲ್ಸ್' ಚಿತ್ರವನ್ನು ಬಿಜೆಪಿಗೆ ಅನುಕೂಲಕರ ರೀತಿಯಲ್ಲಿ ತೆಗೆಯಲಾಗಿದೆ: ಖರ್ಗೆ