ಹಾವೇರಿ: ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಆರಂಭವಾಗಲಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಹಿಂದಿನ ದಿನ ಗುರುವಾರ ರಾಜ್ಯದ ವಿವಿಧ ಸ್ಥಳಗಳಿಂದ ಕನ್ನಡಾಭಿಮಾನಿಗಳು ಆಗಮಿಸುತ್ತಿದ್ದು, ಸಮ್ಮೇಳನದ ಅಚ್ಚುಕಟ್ಟಾದ ಸಿದ್ಧತೆ ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಹಾವೇರಿಯಲ್ಲಿ ಇದೇ ಜನವರಿ 6, 7 ಮತ್ತು 8ರಂದು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಮದುವಣಗಿತ್ತಿಯಂತೆ ಹಾವೇರಿ ನಗರ ಶೃಂಗಾರಗೊಂಡಿದೆ.ಈ ವರೆಗೂ ರಾಜ್ಯದಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನಕ್ಕಿಂತ ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷವಾಗಿದೆ. ಇದು ಊಟದ ವ್ಯವಸ್ಥೆ, ಪ್ರಧಾನ ವೇದಿಕೆ ಮತ್ತು ಸಮಾನಂತರ ವೇದಿಕೆ ಮತ್ತು ಪ್ರದರ್ಶನ ಮಳಿಗೆ ಪುಸ್ತಕ ವಾಣಿಜ್ಯ ಮಳಿಗೆಗಳು ಒಂದೇ ಕಡೆ ಇರುವ ಸಮ್ಮೇಳನ ಇದಾಗಿದೆ ಎಂದು ಕನ್ನಡಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಗೆ ಕನ್ನಡಾಭಿಮಾನಿಗಳನ್ನ ಬರಮಾಡಿಕೊಳ್ಳಲು ಕನಕದಾಸರ ಅರಮನೆ ಪ್ರತಿಕೃತಿ ಸಿದ್ದಪಡಿಸಲಾಗಿದೆ. ವೇದಿಕೆ,ಸಮಾನಾಂತರ ವೇದಿಕೆ, ಕೋಟೆಯ ಪ್ರತಿಕೃತಿ ಮತ್ತು ನಗರದ ಸ್ವಾಗತ ಕಮಾನ್‌ಗಳನ್ನು ಫಕ್ಕಿರೇಶ್ ಮತ್ತು ಮುದಕವಿ ನೇತೃತ್ವದ ತಂಡ ಸಿದ್ಧಪಡಿಸಿದೆ.
ಹಿಂದಿನ 15 ದಿನಗಳಿಂದ ಸಮ್ಮೇಳನ ಜಾಗದಲ್ಲಿರುವ ಕಲಾವಿದರ ತಂಡವೂ ವೇದಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದೆ. ಸಮ್ಮೇಳನ ಹಿಂದಿನ ದಿನ ಈ ರೀತಿ ಜನರು ಬರುವದನ್ನೂ ನೋಡಿದರೆ ಸಮ್ಮೇಳನಕ್ಕೆ ಲಕ್ಷಾಂತರ ಜನ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಕಲಾವಿದರು.
ಇನ್ನು ಸಮ್ಮೇಳನದ ಹಿಂದಿನ ದಿನ ವಸತಿ ಸೇರಿದಂತೆ ಪ್ರತಿನಿಧಿಗಳಿಗೆ ಭೋಜನದ ವ್ಯವಸ್ಥೆ ಮಾಡಿರುವದಕ್ಕೆ ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಸಮ್ಮೇಳನದ ಎಲ್ಲ ರೀತಿಯ ಚಿತ್ರಣವನ್ನ ರೂಪಿಸಿರುವ ಕಲಾವಿದರ ತಂಡದ ಕಾರ್ಯವನ್ನು ಹೊಗಳುತ್ತಿದ್ದಾರೆ.
ದಿನಕ್ಕೊಂದು ವಿಶೇಷ ತಿನಿಸು: ವಿಶೇಷ ಖಾದ್ಯಗಳಾದ ಶೇಂಗಾ ಹೋಳಿಗೆ, ಬೇಸನ್ ಉಂಡಿ, ರವಾ ಉಂಡಿ, ಮೋತಿಚೂರ್, ಗೋಧಿ ಹುಗ್ಗಿ, ಲಡ್ಡು ಮತ್ತು ಲಡಗಿಪಾಕ್ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬಾಣಸಿಗರು ಸಿದ್ಧಪಡಿಸಲಿದ್ದಾರೆ. ಸುಮಾರು 2 ಲಕ್ಷ 50 ಸಾವಿರ ಶೇಂಗಾ ಹೋಳಿಗೆಗಳನ್ನು ತಯಾರಿಸಲಾಗಿದೆ. 600 ಬಾಣಸಿಗರೂ ಸೇರಿದಂತೆ 1,200 ಮಂದಿ ಅಡುಗೆ ಸಿಬ್ಬಂದಿ ಖಾದ್ಯಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.
ಕನ್ನಡಾಂಬೆ ರಥ, ಸಮ್ಮೇಳನಾಧ್ಯಕ್ಷರ ರಥ: ಕಲಾವಿದರ ತಂಡ ಕನ್ನಡಾಂಭೆಯ ರಥ ಮತ್ತು ಸಮ್ಮೇಳನಾಧ್ಯಕ್ಷರ ರಥ ಸಹ ಸಿದ್ದಪಡಿಸಿದೆ. ಇನ್ನು ಈ ರೀತಿಯ ಭವ್ಯಸಜ್ಜಿಕೆ ನಿರ್ಮಾಣವನ್ನು ಕಣ್ತುಂಬಿಕೊಳ್ಳಲು ಹಾವೇರಿ ಸಮ್ಮೇಳನಕ್ಕೆ ಬನ್ನಿ ಎಂದು ಕಲಾವಿದರು ಆಹ್ವಾನಿಸುತ್ತಿದ್ದಾರೆ. ಸಮ್ಮೇಳನದ ಪ್ರಮುಖ ಘಟ್ಟ ಧ್ವಜಾರೋಹಣಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ವೇದಿಕೆಯ ಮುಂಭಾಗದಲ್ಲಿ ಮೂರು ಧ್ವಜದಕಟ್ಟಿಗಳನ್ನು ನಿರ್ಮಿಸಲಾಗಿದೆ. ನಾಳೆ ನಡೆಯುವ ಧ್ವಜಾರೋಹಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಕಸಾಪ ಧ್ವಜಾರೋಹಣ ನಡೆಯಲಿದೆ.
ಈ ಸಲ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಮ್ಮೇಳನದ ಅಧ್ಯಕ್ಷರಿಗೆ ಅದ್ಭುತ ರಥ ರೆಡಿ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷರಿಗೆ ರಥದಲ್ಲಿ ವಿಶೇಷವಾದ ಛತ್ರಿ ಹಾಕಲಾಗಿದೆ. ಮೆರವಣಿಗೆ ನಡೆಯುವ ವೇಳೆ ಕಲಾವಿದರು ಛತ್ರಿ, ಚಾಮರ ಹಿಡಿದು ಸಾಗಲಿದ್ದಾರೆ. ಇದೊಂದು ಕನ್ನಡ ಭಾಷೆಯನ್ನು ಮೆರೆಸುವ ಮೆರವಣಿಗೆ ಆಗಿದ್ದು, ಸಂಪೂರ್ಣ ಕನ್ನಡಮಯವಾಗಿರಲಿದೆ.
ಸುಮಾರು 15 ಕಲಾವಿದರ ತಂಡವು ಕಳೆದ 10 ದಿನಗಳಿಂದ ಕನ್ನಡ ಅಸ್ಮಿತೆ ಸಾರುವ ಸಮ್ಮೇಳನಾಧ್ಯಕ್ಷರ ರಥ ಹಾಗೂ ಕನ್ನಡಾಂಬೆ ರಥವನ್ನೂವಿಶೇಷ ಮಾದರಿಯಲ್ಲಿ ಸಿದ್ಧಪಡಿಸಿದ್ದಾರೆ. ಸಮ್ಮೇಳನಾಧ್ಯಕ್ಷರ ರಥವೂ ಸಾಹಿತ್ಯ ಸಮ್ಮೇಳನದ ಪ್ರಮುಖ ಘಟ್ಟಗಳಲ್ಲಿ ಪ್ರಮುಖವಾಗಿದೆ. ಕಲಾವಿದ ಷಹಜಹಾನ್ ಮುದಕವಿ ಪರಿಕಲ್ಪನೆಯಲ್ಲಿ ಸಮ್ಮೇಳನಾಧ್ಯಕ್ಷರ ರಥ ತಯಾರಾಗಿದೆ. ಪ್ರಾಚೀನ ಕಾಲದಲ್ಲಿ ರಾಜರ ರಥಗಳ ಮಾದರಿ ಈ ರಥ ನಿರ್ಮಿಸಲಾಗಿದೆ ಎಂದು ಕಲಾವಿದ ಮುದಕವಿ ತಿಳಿಸಿದ್ದಾರೆ.
ಸಮ್ಮೇಳನದ ವೇದಿಕೆ ಪಕ್ಕದಲ್ಲಿ ನಿಲ್ಲಿಸಿರುವ ಅಧ್ಯಕ್ಷರ ರಥವೂ ಈಗಾಗಲೇ ಆಕರ್ಷಣೆಯಾಗಿ ಮಾರ್ಪಟ್ಟಿದೆ. ವೇದಿಕೆ ನೋಡಲು ಆಗಮಿಸುತ್ತಿರುವ ಕನ್ನಡದ ಅಭಿಮಾನಿಗಳು ರಥದ ಮುಂದೆ ನಿಂತು ಸೆಲ್ಪಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಇದನ್ನೂಓದಿ:ಹಾವೇರಿ ನುಡಿಹಬ್ಬ: ಕನ್ನಡಾಭಿಮಾನಿಗಳಿಗೆ ಸಿಗಲಿದೆ ವೈವಿಧ್ಯಮಯ ಊಟೋಪಚಾರ