ಹಾವೇರಿ: ರಾಣೆಬೆನ್ನೂರಿನಲ್ಲಿ 8 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.
ಮಹಾರಾಷ್ಟ್ರ ಥಾಣೆ ಜಿಲ್ಲೆಯಿಂದ ಬಂದಿದ್ದ 29 ಕಾರ್ಮಿಕರನ್ನು ಎರಡು ಸರ್ಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಎಲ್ಲಾ ಕಾರ್ಮಿಕರ ಸ್ವಾಬ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ, ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ವಸತಿ ನಿಲಯಗಳ ಅಕ್ಕಪಕ್ಕ ಹೈಅಲರ್ಟ್ ಘೋಷಣೆ ಮಾಡಿದೆ.
ಕಾರ್ಮಿಕರನ್ನು ಕ್ವಾರಂಟೈನ್ ಮಾಡಿರುವ ದೇವರಾಜ ಅರಸು ವಸತಿ ನಿಲಯ ಈಶ್ವರದ ನಗರದಲ್ಲಿದೆ. ಅಕ್ಕಪಕ್ಕ ನೂರಾರು ಮನೆಗಳಿರುವ ಕಾರಣ ವಸತಿ ನಿಲಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿ ವಸತಿ ನಿಲಯದದಿಂದ ನೂರು ಮೀಟರ್ ದೂರದಲ್ಲಿ ಬಿಳಿ ಬಣ್ಣದ ಗೆರೆ ಎಳೆದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ತಾಲೂಕು ಆಡಳಿತ ಊಟದ ವ್ಯವಸ್ಥೆಯನ್ನು ಹೊರಗಡೆಯಿಂದ ನೀಡುತ್ತಿದೆ.