ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಮುಖ್ಯವಾಗಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಬೆಂಬಿಡದೆ ಕಾಡುತ್ತಿದ್ದು, ಜಿಲ್ಲೆಯಲ್ಲಿ 7 ಪೊಲೀಸ್ ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ.
ಕಾನ್ಸ್ಟೇಬಲ್, ಹವಾಲ್ದಾರ್, ಎಎಸ್ಐ, ಪಿಎಸ್ಐ, ಸಿಪಿಐಗೆ ಕೊರೊನಾ ತಗುಲಿದೆ. ಹಾವೇರಿ ನಗರದಲ್ಲಿ ಇಬ್ಬರು ಎಲೆಕ್ಟ್ರಿಕಲ್ ಕೆಲಸ ಮಾಡುವವರಿಗೆ ಸಹ ಕೊರೊನಾ ದೃಢಪಟ್ಟಿದ್ದು, ನಗರದ ಜನರನ್ನ ಆತಂಕಕ್ಕೆ ದೂಡಿದೆ. ಮೇ 4ರಂದು ಹಾವೇರಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಕೊರೊನಾ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಬ್ಯಾಡಗಿ ಸ್ಟೇಷನ್ನಲ್ಲಿ ಕಾಣಿಸಿಕೊಂಡ ಕೊರೊನಾ, ಹಾವೇರಿ ಶಹರ, ಹಾವೇರಿ ಸಂಚಾರಿ, ಕುಮಾರಪಟ್ಟಣಂ, ಹಾನಗಲ್, ಕಾಗಿನೆಲೆ ಹಾಗೂ ಹಿರೇಕೆರೂರು ಪೊಲೀಸ್ ಠಾಣೆಗಳ ಸಿಬ್ಬಂದಿಗೆ ತಗುಲಿದೆ. ಇದುವರೆಗೊ 20ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ಅದರಲ್ಲಿ ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ಕೆಲವರು ಜಿಲ್ಲೆಯ ವಿವಿಧೆಡೆ ಇರುವ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಎಲ್ಲಿಯೇ ವಕ್ಕರಿಸಿದರೂ ಮೊದಲು ಕರ್ತವ್ಯ ನಿರ್ವಹಿಸುವವರು ಪೊಲೀಸರು. ಇದರಿಂದಾಗಿ ಪೊಲೀಸ್ ಇಲಾಖೆಯ ಹೆಚ್ಚು ಸಿಬ್ಬಂದಿಗೆ ಕೊರೊನಾ ತಗುಲಿದೆ ಎನ್ನಲಾಗಿದೆ. ಕೊರೊನಾ ಸೋಂಕಿತ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಶೀಘ್ರವೇ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವುದು ಆತಂಕದ ನಡುವೆ ಸಂತಸ ತಂದಿದೆ. ಹಾವೇರಿ ನಗರದ ಇಬ್ಬರು ಎಲೆಕ್ಟ್ರಿಕಲ್ ವರ್ತಕರಿಗೆ ಕೊರೊನಾ ಶಾಕ್ ನೀಡಿದೆ. ಇಬ್ಬರಿಗೂ ಕೊರೊನಾ ವಕ್ಕರಿಸಿದ್ದು, ಸಾರ್ವಜನಿಕರು ಆದಷ್ಟು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮ ಪಾಲಿಸುವಂತೆ ಎಲೆಕ್ಟ್ರಿಕಲ್ ವರ್ತಕರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪೊಲೀಸ್ ಇಲಾಖೆಯ ಹಿಂದೆ ಬಿದ್ದಿರುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಓರ್ವರಿಗೆ ಸೋಂಕು ಕಾಣಿಸಿಕೊಂಡರೂ ಠಾಣೆ ಸೀಲ್ ಡೌನ್ ಮಾಡಬೇಕು. ಅಲ್ಲದೆ ಉಳಿದ ಸಿಬ್ಬಂದಿಗೆ ಹೋಂ ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಇದೆ. ಈಗಾಗಿ ಪೊಲೀಸ್ ಸಿಬ್ಬಂದಿ ಸಹ ಆದಷ್ಟು ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಕೋವಿಡ್ ನಿಯಮಗಳಂತೆ ಮಾಸ್ಕ್ ಧರಿಸಬೇಕು. ಸಾರ್ವಜನಿಕರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೆ ಪದೇ ಪದೆ ಸ್ಯಾನಿಟೈಸರ್ನಿಂದ ಬಳಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದಾರೆ.