ದಾವಣಗೆರೆ/ಹಾವೇರಿ: ಹಾವೇರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕ ಪಡೆದಿದ್ದಾರೆ. ಸವಣೂರು ತಾಲೂಕಿನ ಹಳೇಮನ್ನಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪ್ರವೀಣ ನೀರಲಗಿ ಪೂರ್ಣ ಅಂಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ.
ಹಾವೇರಿ ನಗರದ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿನಿ ಮಧು ಶೇತಸನದಿ 625 ಅಂಕಕ್ಕೆ 625 ಅಂಕ ಪಡೆದಿದ್ದಾಳೆ. ವಿದ್ಯಾರ್ಥಿ ಪ್ರವೀಣ ನೀರಲಗಿ ತಂದೆ ಬಸನಗೌಡ ಮತ್ತು ತಾಯಿ ಚೈತ್ರಾಗೆ ಹಿರಿಯಮಗ. ಬಸನಗೌಡನಿಗೆ ಇರುವ ಒಂದು ಎಕರೆಯಲ್ಲಿ ಒಕ್ಕಲುತನ ಮಾಡುತ್ತಿದ್ದಾರೆ. ಉಳಿದ ವೇಳೆಯಲ್ಲಿ ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮಗ ಓದುತ್ತಿದ್ದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಬಹಳ ಅಂದರೆ 90 ಪ್ರತಿಶತ ಅಂಕ ಪಡೆಯಬಹುದು ಎಂದುಕೊಂಡಿದ್ದೆವು. ಆದರೆ, ಆತ 625 ಕ್ಕೆ 625 ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ಪ್ರವೀಣ ತಂದೆ ಬಸನಗೌಡ ಮತ್ತು ಚೈತ್ರಾ ಸಂತಸ ವ್ಯಕ್ತಪಡಿಸಿದರು.
ಪ್ರವೀಣ ವ್ಯಾಸಂಗ ಮಾಡುತ್ತಿದ್ದ ಹಲೇಮನ್ನಂಗಿ ಪ್ರೌಢಶಾಲೆಯಲ್ಲಿ ಸಂಭ್ರಮ ಮನೆಮಾಡಿತ್ತು. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಪ್ರವೀಣನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಮುಂದೆ ವಿಜ್ಞಾನ ಓದುವುದಾಗಿ ತಿಳಿಸಿದ ಪ್ರವೀಣ ತನ್ನ ಸಾಧನೆಗೆ ಮನೆಯಲ್ಲಿ ನೀಡಿದ ಪ್ರೋತ್ಸಾಹ ಮತ್ತು ಶಾಲೆಯ ಶಿಕ್ಷಕರು ತೋರಿದ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ್ದಾನೆ. ನಾನು ಚೆನ್ನಾಗಿ ಓದಿ ಪರೀಕ್ಷೆ ಸಹ ಚೆನ್ನಾಗಿ ಬರೆದಿದ್ದೆ. ಅದಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಪ್ರವೀಣ ತಿಳಿಸಿದ್ದಾನೆ.
ಯಾವುದೇ ಟ್ಯೂಷನ್ ಸಹ ಪಡೆಯದೇ ಪ್ರವೀಣ ಈ ಸಾಧನೆ ಮಾಡಿರುವುದು ಗಮನಾರ್ಹ. ಇನ್ನು ಹಾವೇರಿ ಪಟ್ಟಣದಲ್ಲಿರುವ ಕಾಳಿದಾಸ ಪ್ರೌಢಶಾಲೆಯ ಮಧು ಶೇತಸನದಿ 625 ಕ್ಕೆ 625 ಅಂಕಪಡೆದಿದ್ದಾಳೆ. ತಂದೆ ಗುರುಭವನದಲ್ಲಿ ಅಟೆಂಡರ್ ಆಗಿದ್ದು, ತನ್ನ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಮತ್ತು ಹಾವೇರಿ ಶಿಕ್ಷಣ ಇಲಾಖೆ ಆರಂಭಿಸಿದ್ದ ಯುಟ್ಯೂಬ್ ವರದಾ ವಾಹಿನಿ ಕಾರಣ ಎಂದು ಮಧು ತಿಳಿಸಿದ್ದಾಳೆ. ಮುಂದೆ ವೈದ್ಯಳಾಗುವ ಇಂಗಿತವನ್ನ ಅವಳು ವ್ಯಕ್ತಪಡಿಸಿದ್ದಾಳೆ.
ಓದಿ: SSLC Result-2022: 625ಕ್ಕೆ 625 ಅಂಕ ಪಡೆದ ಕುಗ್ರಾಮದ ವಿದ್ಯಾರ್ಥಿನಿ ಆಕೃತಿ
ದಾವಣಗೆರೆಗೆ ಆಲಿಯಾ ಫಿರ್ದೋಸ್ ಪ್ರಥಮ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಯ ನಲ್ಲೂರು ಗ್ರಾಮದ ವಿದ್ಯಾರ್ಥಿನಿ ಆಲಿಯಾ ಫಿರ್ದೋಸ್ ಅವರು 625 ಕ್ಕೆ 624 ಅಂಕ ಪಡೆದು ಇಡೀ ಜಿಲ್ಲೆಗೆ ಪ್ರಥಮ ಬಂದಿದ್ದಾರೆ. ಅಲಿಯಾ ಫಿರ್ದೋಸ್ಗೆ ಗ್ರಾಮದಲ್ಲಿ ಪ್ರಶಂಸೆ ಹರಿದುಬರುತ್ತಿದೆ. ಅಲಿಯಾ ಫಿರ್ದೋಸ್ ಅವರ ತಂದೆ ರಹಮತ್ತುಲ್ಲಾ ಬಡಗಿ ಕೆಲಸ ಮಾಡ್ತಿದ್ದು, ಮಗಳನ್ನು ಕಷ್ಟಪಟ್ಟು ಓದಿಸಿದ್ದಾರೆ. ಇದರ ಫಲವಾಗಿ ಮಗಳು ಜಿಲ್ಲೆಗೆ ಪ್ರಥಮ ಬಂದಿರುವುದು ಸಂತಸ ಮೂಡಿಸಿದೆ.