ಹಾವೇರಿ: ಪಂಚಮಸಾಲಿಗಳಿಗೆ 2ಎ ಮೀಸಲಾತಿ ಸಿಗಬಾರದು ಎನ್ನುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಪಂಚಮಸಾಲಿ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಂಚಮಸಾಲಿಗಳಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಈಗಾಗಲೇ 6 ಬಾರಿ ಭರವಸೆ ನೀಡಿ ಕೈಕೊಟ್ಟಿದೆ. ಸರ್ಕಾರ 2ಡಿ, 2ಸಿ ಮೀಸಲಾಯಿ ನೀಡಲು ಹೋರಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ದಿನಗಳ ಹಿಂದೆ ತಾಯಿ ಮೇಲೆ ಪ್ರಮಾಣ ಮಾಡಿದ್ದರು. ಅದನ್ನು ಸಹ ಅವರು ಉಲ್ಲಂಘಿಸಿದ್ದಾರೆ ಎಂದು ದೂರಿದರು. ಇದೇ ವೇಳೆ ಹರಿಹರ ಪಂಚಮಸಾಲಿ ಗುರುಗಳು ತಮಗೆ ಈ ವಿಚಾರ ಗೊತ್ತಿಲ್ಲ ಎನ್ನುವ ಕುರಿತಂತೆ ಮಾತನಾಡಿದ ಶ್ರೀಗಳು ಅವರಿಗೆ ಹೋರಾಟ ಮಾಡಿದರೆ ಇದೆಲ್ಲ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಹೆದ್ದಾರಿ ತಡೆದು ಆಕ್ರೋಶ: ರಸ್ತೆಯಲ್ಲಿಯೇ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ್ ಹಾಗೂ ಮುಖಂಡರು ಧರಣಿ ಕುಳಿತಿದ್ದರು. ಪಂಚಮಸಾಲಿ 2A ಮೀಸಲಾತಿಗೆ ಆಗ್ರಹಿಸಿ ನಾಳೆಯಿಂದ ನಿರಂತರ ಪ್ರತಿಭಟನಾ ಧರಣಿ ನಡೆಸಲಾಗುವುದು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾಳೆಯಿಂದ ನಿರಂತರ ಧರಣಿ ಹೋರಾಟ ನಡೆಸಲಾಗುತ್ತದೆ. ಹಿಂದುಳಿದ ವರ್ಗಗಳ ಆಯೋಗದ ಸಂಪೂರ್ಣ ವರದಿ ಕೈ ಸೇರಬೇಕು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಪ್ರತಿಕೃತಿ ದಹನ: ಎಸ್ಪಿ ಎಚ್ಚರಿಕೆ: ಸಿಎಂ ಹಾಗೂ ಮಾಜಿ ಸಿಎಂ ಪ್ರತಿಕೃತಿ ದಹನ ಮಾಡಿದ ವಿಜಯಾನಂದ ಕಾಶಪ್ಪನವರ ಹಾಗೂ ಪ್ರತಿಭಟನಾಕಾರರಿಗೆ ಎಸ್ಪಿ ಹನುಮಂತರಾಯ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಲಿಂಗಾಯತ ಪಂಚಮಸಾಲಿಗಳಿಗೆ 2 ಮೀಸಲಾತಿ ನೀಡುವಂತೆ 1994 ರಿಂದಲೇ ಬೇಡಿಕೆ ಇದೆ. ಆದರೆ, 2009 ರಲ್ಲಿ ಅವರನ್ನ ಪ್ರವರ್ಗ 3ಕ್ಕೆ ತರಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಹೋರಾಟ ತೀವ್ರಗೊಂಡಿದೆ. ಈ ಸಂಬಂಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬೃಹತ್ ಪಾದಯಾತ್ರೆಯನ್ನೂ ಕೂಡಾ ನಡೆಸಿದ್ದರು. ಗಡುವಿನ ಮೇಲೆ ಗಡುವು ನೀಡಿದ್ದಾರೆ. ಇವರ ಒತ್ತಾಯದ ಮೇಲೆ ಸರ್ಕಾರ ಇತ್ತೀಚಗೆ 2ಸಿ -2 ಡಿ ಪ್ರವರ್ಗ ರಚನೆ ಮಾಡುವುದಾಗಿ ಘೋಷಿಸಿತ್ತು.
ಆದರೆ, ಮೀಸಲು ಪ್ರಮಾಣ ಎಷ್ಟು ಎಂಬುದನ್ನು ಸರ್ಕಾರ ಬಹಿರಂಗ ಪಡಿಸಿರಲಿಲ್ಲ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪಂಚಮಸಾಲಿ ಹೋರಾಟ ಸಮಿತಿ, ಸರ್ಕಾರದ ಹೊಸ ಮೀಸಲು ವರ್ಗಗಳನ್ನು ತಿರಸ್ಕರಿತ್ತು. ಅಷ್ಟೇ ಅಲ್ಲ ಜನವರಿ 12ಕ್ಕೆ ಸರ್ಕಾರ ಸ್ಪಷ್ಟ ನಿಲುವು ತಿಳಿಸುವಂತೆ ಗಡವು ನೀಡಿತ್ತು. ಇಲ್ಲದಿದ್ದರೆ ಸಿಎಂ ಶಿಗ್ಗಾಂವಿ ನಿವಾಸದ ಮುಂದೆ ಹೋರಾಟ ನಡೆಸುವುದಾಗಿ ಘೋಷಿಸಿತ್ತು. ಆ ಮಾತಿನಂತೆ ಇಂದು ಬಸವಜಯ ಮೃತ್ಯಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಿಗ್ಗಾಂವಿಯಲ್ಲಿ ಪಂಚಮಸಾಲಿಗಳು ಹೋರಾಟ ಆರಂಭಿಸಿದ್ದಾರೆ. ಈ ವೇಳೆ ಸ್ವಾಮೀಜಿಗಳು ಮಾತನಾಡಿದ್ದು, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ.. ಜ.13ಕ್ಕೆ ಸಿಎಂ ಮನೆಗೆ ಮುತ್ತಿಗೆ: ವಿಜಯಾನಂದ ಕಾಶಪ್ಪನವರ
ಮೂರು ದಶಕಗಳಿಂದ ಪ್ರತಿಭಟನೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮೂರು ದಶಕಗಳಿಂದ ಪ್ರತಿಭಟನೆ ನಡೆಸುತ್ತ ಬಂದಿದ್ದು, ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ಜೋರಾಗಿದೆ.
ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ನಿರ್ದೇಶನ: ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಪ್ರಕ್ರಿಯೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಸಂಬಂಧದ ಸರ್ಕಾರದ ಪ್ರಕ್ರಿಯೆಯನ್ನು ಪ್ರಶ್ನಿಸಿ ಬೆಂಗಳೂರಿನ ಡಿ.ಜಿ.ರಾಘವೇಂದ್ರ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಪಂಚಮ ಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವ ಸಂಬಂಧ ಯಾವುದೇ ಪ್ರಕ್ರಿಯೆಗಳನ್ನು ಮುಂದುವರೆಸದಂತೆ ಯತಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.
ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರ ಏನು?: ಎರಡು ವಾರಗಳ ಹಿಂದಷ್ಟೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳಿಗೆ 2C ಹಾಗೂ 2D ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಘೋಷಣೆ ಮಾಡಿತ್ತು. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಲಿಂಗಾಯಿತರಿಗೆ 2D ಕ್ಯಾಟಗರಿ ಸೃಷ್ಟಿಸಿ ತೀರ್ಮಾನ ಕೈಗೊಂಡಿತ್ತು. ಪಂಚಮಸಾಲಿಗರು ಕೇಳಿದ 2A ಮೀಸಲಾತಿಯನ್ನು ಸರ್ಕಾರ ನೀಡದಿರಲು ನಿರ್ಧರಿಸಿತ್ತು. ಅದರ ಬದಲಿಗೆ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತರಿಗೆ 2D ಪ್ರತ್ಯೇಕ ಪ್ರವರ್ಗ ಸೃಷ್ಟಿಸಲು ಉದ್ದೇಶಿಸಿತ್ತು.
ಇದನ್ನೂ ಓದಿ: ಪಂಚಮಸಾಲಿಗರ 2 ಎ ಮೀಸಲು ಬೇಡಿಕೆ ವಿಚಾರ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ನಿರ್ದೇಶನ