ಹಾಸನ : ಶಾಸಕ ಪ್ರೀತಮ್ ಗೌಡ ಪುಕ್ಕಟ್ಟೆ ಪ್ರಚಾರ ಬಿಟ್ಟು ಹೆಚ್ ಡಿ ರೇವಣ್ಣ ಹುಟ್ಟಿಸಿರೋ ಮಗುವಿಗೆ ನಾಮಕರಣ ಮಾಡುತ್ತಿದ್ದಾರೆ. ತಮ್ಮ ಕೈಯಲ್ಲಿ ಮಗು ಹುಟ್ಟಿಸಲು ಆಗುವುದಿಲ್ಲ ಎಂದು ಹಾಸನ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ವರೂಪ್ ಲೇವಡಿ ಮಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಪ್ರೀತಮ್ ಗೌಡ ಚುನಾವಣೆ ವೇಳೆ ರಂಗೋಲಿ, ಕುಂಟಬಿಲ್ಲೆ ಸ್ಪರ್ಧೆ ಆಡಿಸಿಕೊಂಡು ಶಾಸಕರಾಗಿದ್ದಾರೆಯೇ ಹೊರತು ಯಾವ ಕೆಲಸ ಮಾಡಿ ಶಾಸಕರಾಗಿಲ್ಲ. ಇನ್ಮುಂದೆಯಾದ್ರೂ ಮಾಜಿ ಸಚಿವ ಹೆಚ್ ಡಿ ರೇವಣ್ಣನವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿ ಎಂದು ಸಲಹೆ ನೀಡಿದರು. ಪ್ರೀತಮ್ ಗೌಡ ಅವರಿಗೆ ಮಾಜಿ ಪ್ರಧಾನಿ ಕುಟುಂಬದವರ ವಿರುದ್ಧ ಮಾತನಾಡುವುದೇ ಒಂದು ಚಾಳಿ.
ಇಂತಹ ಪುಕ್ಕಟ್ಟೆ ಪ್ರಚಾರ ಬಿಟ್ಟು ಮೊದಲು ಜನತೆಯ ಕ್ಷಮೆ ಯಾಚಿಸಲಿ ಎಂದರು. ಇವರು ಯಾವ ಅಭಿವೃದ್ಧಿ ಕೆಲಸ ಮಾಡದೆ ಹಗಲು ದರೋಡೆ ಮಾಡುತ್ತಿದ್ದಾರೆ. ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ವಿಜಯನಗರ ಬಡಾವಣೆಗೆ ನಮ್ಮ ತಂದೆ ಹೆಚ್ ಎಸ್ ಪ್ರಕಾಶ್‌ರವರು ಉಚಿತ ಕಸ ವಿಲೇವಾರಿ ಮಾಡಲು ಟಿಪ್ಪರ್ ಖರೀದಿಸಿ ಸಿಇಟಿಬಿಯವರಿಗೆ ನೀಡಿದ್ದರು. ಈ ಟಿಪ್ಪರ್ ವಾಹನಕ್ಕೆ ಅಂದು ಯಾವ ಫೋಟೋ ಹಾಕಿರಲಿಲ್ಲ. ಆದರೆ, ಶಾಸಕ ಪ್ರೀತಮ್ ಗೌಡ ಅವರು ಆಟೋ ಪಡೆದು ಪರಿವರ್ತನ ಟ್ರಸ್ಟ್ ಮಾಡಿಕೊಂಡು ಜೊತೆಗೆ ತಮ್ಮ ಪೋಟೋ ಹಾಕಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ಎಲ್ಲಾ ಕಡೆ ಫೋಟೋ ಹಾಕಿಕೊಂಡಿರುವುದಾಗಿ ಶಾಸಕರು ದೂರುತ್ತಿದ್ದಾರೆ. ಆದರೆ, ಶಾಸಕರು ಕೇವಲ ₹10 ಲಕ್ಷ ಅನುದಾನಕ್ಕೆ 20 ಕಡೆ ಫೋಟೋ ಹಾಕಿಕೊಂಡಿದ್ದಾರೆ. ಇವರ ರೀತಿ ಫೋಟೋ ಹುಚ್ಚು ಇದ್ದಿದ್ದರೇ ರೇವಣ್ಣನವರು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಹಾಸನ ಪೂರ್ತಿ ಅವರ ಫೋಟೋ ಇರುತಿತ್ತು. ಅವರು ಫೋಟೋ ಹಾಕಲು ಮುಂದಾಗಿಲ್ಲ. ನಾವು ಕಾರ್ಯಕರ್ತರು ಸೇರಿ ಫೋಟೋ ಹಾಕಿದ್ದೇವೆ ಎಂದು ತಿರುಗೇಟು ನೀಡಿದರು.