ಅರಸೀಕೆರೆ (ಹಾಸನ): ರಾಜ್ಯದಲ್ಲಿ ಇತ್ತೀಚಿನ ದಿನಗಳಳಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಬರುವ ಪ್ರಕರಣಗಳು ಹೆಚ್ಚುತ್ತಿವೆ. ಹುಲಿ ಹಾಗೂ ಚಿರತೆ ನಾಡಿಗೆ ನುಗ್ಗುವ ಪ್ರಮಾಣ ಅಧಿಕವೆಂದೇ ಹೇಳಬಹುದು. ಅದೇ ರೀತಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದೆ. ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಧೈರ್ಯ ಮಾಡಿದ ಯುವಕನೋರ್ವ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಹಿಡಿದು ಬೈಕ್‌ಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಾಗಿವಾಳು ಗ್ರಾಮದ ಮುತ್ತು ಈ ಸಾಹಸ ಮೆರೆದಿರುವ ಯುವಕ.
ಘಟನೆಯ ಸಂಪೂರ್ಣ ವಿವರ: ದಾಳಿ ಮಾಡಲು ಬಂದ ಚಿರತೆ ಜತೆ ಹೋರಾಡಿದ ಯುವಕ ಗ್ರಾಮಸ್ಥರ ಸಹಾಯದಿಂದ ಚಿರತೆ ಕಾಲುಗಳನ್ನು ಕಟ್ಟಿ ತನ್ನ ದ್ವಿಚಕ್ರ ವಾಹನದಲ್ಲಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿ ಸಾಹಸ ಮೆರೆದಿದ್ದಾನೆ. ಜು. 14ರಂದು ತನ್ನ ಜಮೀನಿನಲ್ಲಿ ಬೆಳೆದಿದ್ದ ಶುಂಠಿಗೆ ಔಷಧಿ ಸಿಂಪಡಿಸಲು ಹೋದ ಸಂದರ್ಭದಲ್ಲಿ ಊರಿನ ಕೆಲವು ವ್ಯಕ್ತಿಗಳು ಚಿರತೆ ಬಂದಿದೆ ಎಂದು ತಿಳಿಸಿದರು. ಮುತ್ತು ಮುಂದೆ ಸಾಗುವಾಗ ಮರದ ಮೇಲೆ ಕುಳಿತಿದ್ದ ಚಿರತೆ ಆತನ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಚಿರತೆಯ ಜತೆ ಹೋರಾಟ ಮಾಡಿ ಚಿರತೆಯ ಕಾಲುಗಳನ್ನು ಕಟ್ಟಿ ತನ್ನ ಜಮೀನಿನಿಂದ ಬಾಗಿವಾಳ ಗ್ರಾಮಕ್ಕೆ ಬೈಕ್ನಲ್ಲಿ ತಂದಿದ್ದಾನೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡಿ ವಶಕ್ಕೆ ಪಡೆದಿದ್ದಾರೆ. ನಂತರ ಗಾಯಾಳು ಮುತ್ತುುಗೆ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಯುವಕ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್, ಉಪ ಅರಣ್ಯ ಅಧಿಕಾರಿ ರಮೇಶ್ ಜಿ. ಹೆಚ್, ಅರಣ್ಯ ರಕ್ಷಕ ಅರುಣ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತದರು.
ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ': ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡತಿಕೆರೆ ಗ್ರಾಮದಲ್ಲಿ ಹಸು ತನ್ನ ಮಾಲೀಕನನ್ನು ಬಚಾವ್ ಮಾಡಿದ್ದು, ಅದಕ್ಕೆ ಶ್ವಾನ ಕೂಡ ಬೆಂಬಲ ಕೊಟ್ಟ ಅಪರೂಪದ ಘಟನೆ ಬೆಳಕಿಗೆ ಬಂದಿತ್ತು. ತನ್ನ ಮಾಲೀಕನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದ್ದನ್ನು ಗಮನಿಸಿದ ಹಸು, ಚಿರತೆಗೆ ಬಲವಾಗಿ ಗುದ್ದಿತ್ತು. ಜೊತೆಗಿದ್ದ ಮಾಲೀಕನ ಶ್ವಾನ ಕೂಡ ಚಿರತೆ ಮೇಲೆ ಎಗರಿ ಹಿಮ್ಮೆಟ್ಟಿಸಿತ್ತು. ಕೊಡತಿಕೆರೆ ಗ್ರಾಮದ ರೈತ ಕರಿಹಾಲಪ್ಪ (58) ಚಿರತೆ ದಾಳಿಯಿಂದ ಪಾರಾಗಿದ್ದರು.
"ಮನುಷ್ಯರಿಗೆ ಎಂದಿಗೂ ಈ ಚಿರತೆ ತೊಂದರೆ ಕೊಟ್ಟಿರಲಿಲ್ಲ. ಆದರೆ ನನ್ನ ಎದುರಿಗೆ ಮೊನ್ನೆ ಚಿರತೆ ಬಂದು ನಿಂತು, ದಾಳಿ ಮಾಡಿದಾಗ ಪ್ರಾಣವೇ ಹೋದಂತಾಗಿತ್ತು. ಆದರೆ, ನಮ್ಮ ಗೌರಿ(ಹಸು) ನನ್ನ ಜೀವ ಉಳಿಸಿತು" ಎಂದು ರೈತ ಕರಿಹಾಲಪ್ಪ ಹರ್ಷ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ'; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ!