ಹಾಸನ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಧೂಳಿಪಟವಾಗಿದೆ. ಆದರೂ ಅವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯ ಸರ್ಕಾರದ ಹಗರಣದಲ್ಲಿ ಕೇಂದ್ರ ಸರ್ಕಾರಕ್ಕೆ ಪಾಲಿದೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಿಎಸ್ಐ ಹಗರಣ ಸೇರಿದಂತೆ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಿದ್ದರಾಮಯ್ಯ ಅವರಿಗೆ ನಾಲಿಗೆಯಲ್ಲಿ ಹಿಡಿತವಿಲ್ಲ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ?. ಮೊದಲು ಕ್ಷೇತ್ರ ಹುಡುಕಿಕೊಂಡು ಮಾತನಾಡಲಿ ಎಂದರು.
ಡಿಕೆಶಿ-ಸಿದ್ದರಾಮಯ್ಯ ಕಚ್ಚಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ನೋಡಿ ಜನರು ಬೇಸತ್ತು ಹೋಗಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಯಾಕೆ ಅವರಿಗೆ ಸೋಲಾಯ್ತು?. ಬಾದಾಮಿಯಲ್ಲಿ ನಾನು ಒಂದು ದಿನ ಹೋಗಿದ್ದರೆ, ಅವರು ಅಲ್ಲಿಯೂ ಸೋಲು ಅನುಭವಿಸುತ್ತಿದ್ದರು ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದವರು ನಾವು ಅಧಿಕಾರಕ್ಕೆ ಬರುವುದಾಗಿ ಹೇಳಿಕೆ ನೀಡುವುದರ ಮೂಲಕ ಯಾವುದೋ ಒಂದು ಭ್ರಮೆಯಲ್ಲಿದ್ದಾರೆ. ಆದ್ರೆ ಅದು ಸಾಧ್ಯವಿಲ್ಲ. ಪ್ರಧಾನಿ ಮೋದಿ ಹಾಗೂ ನಮ್ಮ ಸರ್ಕಾರದ ಜನಪರ ಕೆಲಸಗಳಿಂದ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯಾಯ ಸಿಗುವ ವಿಶ್ವಾಸವಿದೆ: ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ವಿಚಾರವಾಗಿ ಉತ್ತರಿಸಿದ ಬಿಎಸ್ವೈ, ಅದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ಅ.7 ರಂದು ರಾಜ್ಯ ಕಾರ್ಯಕಾರಣಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಅಲ್ಲಿ ರಾಜ್ಯದ ಪ್ರವಾಸದ ಬಗ್ಗೆ ತೀರ್ಮಾನ ಮಾಡಲಾಗುವುದು. ಮಳೆ ಮತ್ತು ವಿಧಾನ ಸಭೆ ಅಧಿವೇಶನದ ಕಾರಣ ಪ್ರವಾಸ ಮುಂದೂಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಅಧಿಕಾರವಿದ್ದಾಗ ವಿಮಾನ ನಿಲ್ದಾಣ ಯಾಕೆ ಮಾಡಲಿಲ್ಲ?: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ತಂದೆ ಹೆಚ್.ಡಿ.ದೇವೇಗೌಡರು ಪ್ರಧಾನಿ, ಅವರ ತಮ್ಮ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಮಾನ ನಿಲ್ದಾಣ ನಿರ್ಮಾಣದ ಪ್ರಯತ್ನ ಏಕೆ ಮಾಡಲಿಲ್ಲ? ಎಂದು ರೇವಣ್ಣನ ವಿರುದ್ಧ ಬಿಎಸ್ವೈ ಗುಡುಗಿದರು.
ನಗರದ ಶಾಸಕ ಪ್ರೀತಂ.ಜೆ.ಗೌಡ ಅವರ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸುತ್ತ-ಮುತ್ತಲಿನ ನಾಲ್ಕೈದು ಜಿಲ್ಲೆಗೆ ಅನುಕೂಲವಾಗಲಿದೆ. ಹಾಸನ ಜಿಲ್ಲೆಗೆ ಬೇಕಾದರೆ ರೇವಣ್ಣನವರು ಪ್ರಯತ್ನ ಮಾಡಲಿ ಎಂದರು.
ಪ್ರೀತಂ ಜೆ.ಗೌಡ ಒಬ್ಬ ಶಾಸಕನಾಗಿ ಈ ಭಾಗದಲ್ಲಿ ಮಾಡಿರುವ ಕೆಲಸ ಉಳಿದ ಶಾಸಕರಿಗೆ ಮಾದರಿ. ಹಾಸನ ಕ್ಷೇತ್ರದ ಅಭಿವೃದ್ಧಿಗೆ ಬಹಳ ಆಡಚಣೆ ಇದ್ದರೂ ರಸ್ತೆ ಬದಿ ವ್ಯಾಪಾರಿಗಳಿಗೆ ಉತ್ತಮ ಫುಡ್ ಕೋರ್ಟ್ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಮುಂದೆ ಶಿವಮೊಗ್ಗದಲ್ಲಿ ನಾವು ಇದೇ ರೀತಿ ಅಭಿವೃದ್ದಿ ಮಾಡುತ್ತೇವೆ. ಪ್ರೀತಂ ಗೌಡರಿಗೆ ಉತ್ತಮ ಭವಿಷ್ಯವಿದ್ದು, ಮುಂದಿನ ಸಲ ಮತ್ತೆ ಶಾಸಕರಾಗುತ್ತಾರೆ ಎಂದು ಭವಿಷ್ಯ ನುಡಿದರು.
ಹಾಸನ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಸಂಘಟನೆ ಮಾಡಲಾಗುವುದು. ಅಧಿವೇಶನ ಮುಗಿದ ಮೇಲೆ ಎರಡು ತಂಡ ಮಾಡಿಕೊಂಡು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ ಜಯಗಳಿಸಿ ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿ ಅಧಿಕಾರಗಳಿಸಲಿದೆ. ಬಿಜೆಪಿ ಸರ್ಕಾರದ ವಿರುದ್ಧ ಶೇ. 40 ಭ್ರಷ್ಟಾಚಾರ ಆರೋಪ ಆಧಾರ ರಹಿತ. ಆರೋಪ ಯಾರು ಬೇಕಾದರೂ ಮಾಡಬಹುದು. ವಿರೋಧ ಪಕ್ಷದವರು ದಾಖಲಾತಿ ಇದ್ದಲ್ಲಿ ಸದನದಲ್ಲಿ ನೀಡಲಿ ಎಂದು ಬಿಎಸ್ವೈ ಸವಾಲು ಹಾಕಿದರು.
ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದೇನೆ: ಆರ್ ವಿ ದೇಶಪಾಂಡೆ