ಹಾಸನ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬೇಲೂರು ತಾಲೂಕಿನ ಯಗಚಿ ಜಲಾಶಯ ಭರ್ತಿಯಾಗಿದೆ.
ಚಿಕ್ಕಮಗಳೂರು, ಹಾಸನ ಮತ್ತು ಹೊಳೆ ನರಸೀಪುರದ ಕೆಲ ಭಾಗಗಳಿಗೆ ನೀರುಣಿಸುವ ಜಲಾಶಯ ಇದಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಎರಡು ಕ್ರಸ್ಟ್ ಗೇಟ್ಗಳ ಮೂಲಕ ನೀರು ಹೊರ ಬಿಡಲಾಗಿತ್ತು. ಮತ್ತೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಉಳಿದ ಮೂರು ಕ್ರಸ್ಟ್ ಗೇಟ್ಗಳ ತೆರೆದು ನೀರು ಹೊರಬಿಡಲಾಗಿದೆ.
ಹೀಗಾಗಿ ನದಿಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ. ಕಳೆದ ಬಾರಿಯೂ ಇದೇ ಸಮಯಕ್ಕೆ ಯಗಚಿ ಜಲಾಶಯ ಭರ್ತಿಯಾಗಿತ್ತು.
ಇನ್ನು, ಜಿಲ್ಲೆಯ ಹಾರಂಗಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜಲಾಶಯದಿಂದ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಹರಿಸುವುದರಿಂದ ಅರಕಲಗೂಡು ತಾಲೂಕಿನ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ: ಗಜಪಡೆ ತಂದ ಅವಾಂತರ: 14 ವರ್ಷದ ಬಾಲಕ ಸಾವು.. ಮನೆ ಧ್ವಂಸ..!