ಹಾಸನ: ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಸದಸ್ಯರು ನಗರದ ಬಿ.ಎಂ.ರಸ್ತೆ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಆದೇಶ ಪ್ರತಿಯನ್ನು ದಹಿಸಿದರು.
ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ಹೆಚ್ಚಿಸಿರುವುದು ಖಂಡನೀಯ. ಬಂಡವಾಳದಾರರನ್ನು ಮಾತ್ರವೇ ಮೇಲೆತ್ತುವ ಮತ್ತು ಅವರಿಗೆ ಕಾರ್ಮಿಕರ ದುಡಿಮೆ ಲೂಟಿ ಮಾಡಲು ಅವಕಾಶ ನೀಡುವುದೇ ಇದರ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದೇಶವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಬೇಕು. ನಿರುದ್ಯೋಗ ನಿವಾರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ದುಡಿಯುವ ಜನರನ್ನು ಸಂಕಷ್ಟಕ್ಕೆ ತಳ್ಳಿ, ಬಂಡವಾಳದಾರರ ಹಿತರಕ್ಷಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದೇನಲ್ಲ. ಆದರೆ, ಈಗಾಗಲೇ ಕೊರೊನಾದಿಂದ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿಗೊಳಿಸಿ ಮತ್ತಷ್ಟು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದರು.