ಅರಕಲಗೂಡು(ಹಾಸನ): ಲಾಕ್ ಡೌನ್ ನಿಂದ ಜೀವನವೇ ಸಾಕೆನಿಸಿದೆ. ಆದಾಗ್ಯೂ ಕೋವಿಡ್- 19 ಲಾಕ್‌ಡೌನ್ ಸಂಕಷ್ಟ ಕಿವಿಗೆ ಹಾಕಿಕೊಳ್ಳದೆ ಮೈಕ್ರೋ ಫೈನಾನ್ಸ್ ಗಳು, ವಿವಿಧ ಸಂಘ- ಸಂಸ್ಥೆಗಳು ಸಾಲ ಮರು ಪಾವತಿಗೆ ಒತ್ತಡ ಹಾಕುತ್ತಿವೆ. ಇದರಿಂದ ಜೀವನ ನಿರ್ವಹಣೆ ಸಾಧ್ಯವಾಗದೆ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ತಾಲೂಕಿನ ಮಹಿಳಾ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
ರಾಮನಾಥಪುರ ಹೋಬಳಿ ಶಿರಧನಹಳ್ಳಿ ಗ್ರಾಮದ ಮಹಿಳಾ ಸಂಘದ ಸದಸ್ಯೆ ಹರಿಣಿ ಈ ಬಗ್ಗೆ ಮಾತನಾಡಿ, ಕಳೆದೆರಡು ತಿಂಗಳಿನಿಂದ ಕರೊನಾ ಲಾಕ್‌ಡೌನ್ ಪರಿಣಾಮ ಜನ ಜೀವನ ತತ್ತರಿಸಿದೆ. ಉದ್ಯೋಗವಿಲ್ಲದೆ ಕುಟುಂಬ ನಿರ್ವಹಣೆಯೇ ದುಸ್ತರವಾಗಿವೆ. ಈ ನಡುವೆ ಮೈಕ್ರೋ ಫೈನಾನ್ಸ್ ಳಾದ ಗ್ರಾಮೀಣ ಕೂಟ, ಮುತ್ತೂಟ್ ಫೈನಾನ್ಸ್, ಸಮಸ್ತ ಸಂಘ, ಗ್ರಾಮಶಕ್ತಿ, ಆರ್ಬಿಎಲ್, ಬಿಎಸ್ಎಸ್, ಎಲ್ಇ ಮತ್ತು ಧರ್ಮಸ್ಥಳ ಸಂಘ ಹಾಗೂ ಐಸಿಐಸಿ ಸಂಘಗಳು ನೀಡಿರುವ ಸಾಲ ಮರುಪಾವತಿಸಲು ಮಹಿಳಾ ಸಂಘದ ಸದಸ್ಯರಿಗೆ ಒತ್ತಯಿಸುತ್ತಿದ್ದಾರೆ. ಮಹಿಳೆಯರು ತಮ್ಮ ಸಂಕಷ್ಟವನ್ನು ತೋಡಿಕೊಂಡರೂ ಸಾಲ ಮರು ಪಾವತಿಸಲು ಕಾಲಾವಕಾಶ ನೀಡದೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳುತ್ತಾ ಆಕೆ ಕಣ್ಣೀರು ಹಾಕಿದರು.
ಕೊರೊನಾ ಸೋಂಕು ತಮ್ಮೂರಿನ ಪಕ್ಕದ ಹಳ್ಳಿಗೆ ಬಂದಿದ್ದು ಭೀತಿ ಆವರಿಸಿದೆ. ಮನೆಯಲ್ಲಿ ಯಾರೊಬ್ಬರಿಗೂ ದುಡಿಮೆ ಇಲ್ಲದೆ ಅಕ್ಕಿ, ಬೇಳೆ ಹೊಂದಿಸುವುದೆ ಕಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ರೂ ಪ್ಯಾಕೇಜ್‌ನಲ್ಲಿ ಶೇ. 2ರಷ್ಟನ್ನು ಮಹಿಳಾ ಸಂಘ ಸಂಸ್ಥೆಗಳಿಗೆ ನೀಡಿದ್ದರೆ ಅನುಕೂಲವಾಗುತ್ತಿತ್ತು. ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮ್ಮ ಬಳಿ ಈಗ ಬಿಡಿಗಾಸು ಇಲ್ಲವಾಗಿದೆ. ಇಂಥ ಸಂಕಷ್ಟದಲ್ಲಿ ಹಣ ಕಟ್ಟಲು ತೊಂದರೆಯಾಗಿದೆ ಎಂದು ಸದಸ್ಯೆ ಅಭಿಲಾಷ ಅಳಲು ತೋಡಿಕೊಂಡರು.
ಇನ್ನೂ ರೈತ ಸಂಘದ ಮುಖಂಡ ಜಗದೀಶ್ ಈ ಬಗ್ಗೆ ಮಾತನಾಡಿ, ಸರ್ಕಾರ ಬಡ ವರ್ಗದ ಜನರ ನೋವಿಗೆ ಧ್ವನಿಯಾಗುತ್ತಿಲ್ಲ. ಕ್ಷೇತ್ರದ ಶಾಸಕರು ಮತ್ತು ಮಾಜಿ ಶಾಸಕರು ಜನರ ಕಷ್ಟಕ್ಕೆ ನೆರವಾಗುತ್ತಿಲ್ಲ. ಸಂಘ, ಸಂಸ್ಥೆಗಳು ಮಹಿಳೆಯರಿಂದ ಹಣ ಕಟ್ಟುವಂತೆ ಪೀಡಿಸುತ್ತಿರುವುದು ಸರಿಯಲ್ಲ. ಈ ರೀತಿ ಮಹಿಳಾ ಸದಸ್ಯರಿಗೆ ತೊಂದರೆ ನೀಡಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.