ಹಾಸನ: ಈಗ ಬಂದಿರುವ ಮಹಾಮಾರಿ ಕಾಯಿಲೆ ಮುಂದಿನ ದಿನಗಳಲ್ಲಿ ಜಡತ್ವ ವಸ್ತುಗಳಾದ ಕಲ್ಲು, ಮರಕ್ಕೂ ಆವರಿಸಲಿದೆ. ಆದರೆ ಭಾರತದ ಭೂಮಿಗೆ ಇಂತಹ ರೋಗರುಜಿನ ತಡೆಯುವ ಶಕ್ತಿಯಿದೆ ಎಂದು ಕೊರೊನಾ ವೈರಸ್ ಬಗ್ಗೆ ಕೋಡಿ ಮಠದ ಶ್ರೀಗಳು ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಋಷಿಮುನಿಗಳ ಮಂತ್ರ, ಜಪ-ತಪ ಶಕ್ತಿ ನಮ್ಮ ದೇಶವನ್ನು ರಕ್ಷಣೆ ಮಾಡ್ಕೊಂಡು ಬರ್ತಾ ಇದೆ. ಈ ತಂತ್ರಯುಗದಲ್ಲಿ ಮಾನವ ಎಲ್ಲಾ ಪಡೆದುಕೊಂಡ ಆದ್ರೆ ಶಾಂತಿ ಪಡೆಯಲಿಲ್ಲ. ಕೊರೊನಾದಂತಹ ಭಯಂಕರ ರೋಗಕ್ಕೆ ಮನುಷ್ಯ ಹೆದರದೆ ನಂಬಿಕೆ ಉಳಿಸಿಕೊಂಡು, ದೇವರ ಮೇಲೆ ಸಂಕಲ್ಪ ಮಾಡಬೇಕು. ಆಗ ಅವನಿಗೆ ಏನೂ ಆಗುವುದಿಲ್ಲ ಎಂದರು.
ಇಂದು ಈ ರೀತಿಯ ಘಟನೆಗಳಿಗೆ ಕಾರಣ ಪ್ರಕೃತಿಯನ್ನು ಹಾಳು ಮಾಡಿದ್ದು, ಮನುಷ್ಯ ಎಲ್ಲಿ ಕಳೆದುಕೊಂಡಿದ್ದಾನೋ ಅಲ್ಲೇ ಹುಡುಕಬೇಕು. ಕೊರೊನಾ ವೈರಸ್, ಋಷಿ ಮುನಿ ಕೊಟ್ಟ ಗಿಡಮೂಲಿಕೆ, ಹಳ್ಳಿನಾಟಿ ವೈದ್ಯರಿಂದಲೂ ಹುಷಾರಾಗುತ್ತೆ. ಅಂತವರನ್ನ ಹುಡುಕಬೇಕು. ಈಗ ಬಂದ ಕಾಯಿಲೆ ಮುಂದೆ ಜಡತ್ವದಂತ ಕಲ್ಲು, ಮರಕ್ಕೂ ರೋಗ ಆವರಿಸುತ್ತೆ. ದೈವ ಮತ್ತು ಪಕೃತಿ ಕಾಪಾಡಿದ್ರೆ ಮಾತ್ರ ಉಳಿವು ಸಾಧ್ಯ. ಈ ರೋಗಗಳೆಲ್ಲಾ ಪ್ರಕೃತಿ ಮೇಲೆ ಮನುಷ್ಯ ಮಾಡಿರುವ ದಬ್ಬಾಳಿಕೆಯಿಂದ ಬಂದಿರೋದು. ಅರಣ್ಯ ನಾಶ ಮಾಡಿರುವುದರಿಂದ ನಾಡಿನಲ್ಲಿ ಸುಖವಿಲ್ಲದಂತಾಗಿದೆ. ಹಿಂದೆ ಭೂಮಿ ಮೇಲೆ ಮನುಷ್ಯ ಮಲಗ್ತಿದ್ದ. ಇಂದು ಮನುಷ್ಯ ಉಪ್ಪರಿಗೆ ಮೇಲೆ ಮಲಗ್ತಿದ್ದಾನೆ. ಮನುಷ್ಯ ಮತ್ತು ಭೂಮಿ ಅಂತರ ಕಮ್ಮಿಆಗಿದೆ ಎಂದು ತಿಳಿಸಿದರು.