ಸಕಲೇಶಪುರ(ಹಾಸನ): ಕೊರೊನಾ ಸೋಂಕು ಹರಡುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಇದೇ ತಿಂಗಳ 25 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಎಲ್ಲ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ನಗರದ ಪಯೋನಿಯರ್ ಪಬ್ಲಿಕ್ ಶಾಲೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ದತೆ ಬಗ್ಗೆ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 1196 ಮಕ್ಕಳು ಪರೀಕ್ಷೆ ಬರೆಯಲಿದ್ದು, 11 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಮನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗುವುದಕ್ಕೆ ಬಸ್ನ ವ್ಯವಸ್ಥೆ ಮಾಡಲಾಗಿದೆ. ಬಸ್ಗಳು ಸರಿಯಾದ ಸಮಯಕ್ಕೆ ಹೊರಟು, 30 ನಿಮಿಷ ಮೊದಲೇ ಪರೀಕ್ಷಾ ಕೇಂದ್ರ ತಲುಪಬೇಕು. ತಾಂತ್ರಿಕ ಕಾರಣಗಳಿಂದ ಬಸ್ನ ಸಮಸ್ಯೆ ಉಂಟಾದರೆ, ತಕ್ಷಣ ಮತ್ತೊಂದು ಬಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಯಾವುದಾದರೂ ಕಾರಣಗಳಿಂದ 30 ನಿಮಿಷ ತಡವಾಗಿ ಆಗಮಿಸಿದರೂ ಸಹ ಮಾನವೀಯ ದೃಷ್ಟಿಯಿಂದ ಮಕ್ಕಳಿಗೆ ಪ್ರವೇಶ ನೀಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಂಘ, ಸಂಸ್ಥೆಗಳಿಂದ ಮಾಸ್ಕ್ ನೀಡುವ ವ್ಯವಸ್ಥೆ ಮಾಡಲಾಗುವುದು. ಕುಡಿವ ನೀರಿನ ವ್ಯವಸ್ಥೆಯನ್ನ ಈಗಾಗಲೇ ಮಾಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳು ಕೊರೊನಾದಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಭಯ ಪಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು, ಮಕ್ಕಳು ಯಾವುದೇ ಭಯವಿಲ್ಲದೇ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಮ್ಮ ತಾಲೂಕು ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿಯೂ ಕೊರೊನಾ ಸೋಂಕಿನ ನಡುವೆಯೂ ಸಹ ಅದೇ ರೀತಿ ಫಲಿತಾಂಶ ಬರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಎಚ್.ಬಿ. ಶಿವಾನಂದ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್, ತಹಶೀಲ್ದಾರ್ ಮಂಜುನಾಥ್, ಡಿವೈಎಸ್‌ಪಿ ಗೋಪಿ, ಕೆಎಸ್‌ಆರ್‌ಟಿಸಿ ಸ್ಥಳೀಯ ಡಿಪೋ ವ್ಯವಸ್ಥಾಪಕ ಎಡ್ವಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.