ಹಾಸನ: ನಾಳೆಯಿಂದ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಹೇಮಾವತಿ ಜಲಾಶಯ ಅಣೆಕಟ್ಟು ಉಪವಿಭಾಗದ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವೆಂಕಟರಮಣಪ್ಪ ತಿಳಿಸಿದ್ದಾರೆ. 15 ದಿನಗಳವರೆಗೆ ಸುಮಾರು 2 ಟಿಎಂಸಿ ನೀರು ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತುಮಕೂರಿಗೆ ನೀರು ಕೊಂಡೊಯ್ಯುವ ಬಗ್ಗೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಕಡೆಗೂ ಹಾಸನದಿಂದ ನೀರು ಕೊಂಡೊಯ್ಯಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿದ್ದು, ಇದು ಉಭಯ ಜಿಲ್ಲೆಗಳ ನಡುವೆ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ತುಮಕೂರಿಗೆ ನೀರು ಬಿಡುಗಡೆಯಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಬಳಿ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ವೆಂಕಟರಮಣಪ್ಪ ತಿಳಿಸಿದ್ದಾರೆ.