ಹಾಸನ: ಇಂದಿನಿಂದ ಹೇಮಾವತಿ ಜಲಾಶಯದಿಂದ ತುಮಕೂರು ಭಾಗಕ್ಕೆ ನಾಲೆಯ ಮೂಲಕ ನೀರು ಹರಿಸಲಾಗುತ್ತಿದ್ದು, ಈ ಭಾಗದ ರೈತರು ಸಂತಸಗೊಂಡಿದ್ದಾರೆ.
ಕುಡಿಯುವ ನೀರಿನ ಕಾಮಗಾರಿಗಳನ್ನ ತುರ್ತಾಗಿ ಪೂರೈಸಿ, ಯಾವುದೇ ಹಳ್ಳಿಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಕಳೆದ ವಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ರು. ಇದರ ಜೊತೆಗೆ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಕೂಡಾ ಹೇಮಾವತಿ ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದರು. ಜೊತೆಗೆ ರೈತರು ಬಹಳ ನಷ್ಟ ಅನುಭವಿಸುತ್ತಿದ್ದು ಸೂಕ್ತ ಪರಿಹಾರ ಒದಗಿಸುವಂತೆ ಅವರು ಮನವಿ ಮಾಡಿದರು. ಇಂದಿನಿಂದ ಎರಡು ವಾರಗಳ ಕಾಲ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಯಲಿದ್ದು,ಒಟ್ಟು 2 ಟಿಎಂಸಿಯಷ್ಟು ನೀರು ಕಾಲುವೆ ಮೂಲಕ ತುಮಕೂರು ಭಾಗಕ್ಕೆ ಹರಿಯಲಿದೆ.
ಆದರೆ, ನೀರು ಹರಿಸಬೇಕು ಎಂಬ ಮಾತಿಗೆ ಸಭೆಯಲ್ಲಿದ್ದ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಸನ ಭಾಗಕ್ಕೆ ನೀರಿಲ್ಲ. ಇಂತಹ ಸಂದರ್ಭದಲ್ಲಿ ನೀರು ನಾಲೆಗೆ ನೀರು ಬಿಟ್ಟರೆ ನಮ್ಮ ಜಿಲ್ಲೆಗೆ ಸಮಸ್ಯೆಯುಂಟಾಗುತ್ತದೆ ಎಂದಿದ್ದರು. ಇದು ಉಭಯ ಜಿಲ್ಲೆಗಳ ನಡುವೆ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಹಾಸನ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಬಳಿ ಪೊಲೀಸ್ ಬಂದೋಬಸ್ತ್ ಮಾಡಿದೆ.