ಹಾಸನ: ದಿನೇ ದಿನೇ ಮಳೆ ಹೆಚ್ಚಾಗುತ್ತಿದ್ದು, ಈಗಾಗಲೇ ಹೇಮಾವತಿ ಆಣೆಕಟ್ಟು ತುಂಬುವ ಹಂತ ತಲುಪಿರುವುದರಿಂದ ನಾಲೆಗಳಿಗೆ ನೀರು ಬಿಡುವ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಕೂಡಲೇ ಹೇಮಾವತಿ ಆಣೆಕಟ್ಟೆಯಿಂದ ನಾಲೆಗೆ ನೀರು ಹರಿಸಬೇಕು. ನದಿಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಯ ರೈತರು ಭೂಮಿಗೆ ನೀರು ಬಿಡುವಂತೆ ಒತ್ತಾಯ ಮಾಡುತ್ತಿರುವುದರಿಂದ ನೀರು ಬಿಡಲು ಆದೇಶ ನೀಡುತ್ತಿರುವುದಾಗಿ ತಿಳಿಸಿದರು.
ಗುಡ್ಡ ಕುಸಿಯುವ ಕಡೆ ಹಾಗೂ ನೀರು ಹೆಚ್ಚು ಹರಿಯುವ ಸ್ಥಳಗಳಲ್ಲಿ ಇರುವ ಜನರನ್ನು ತಕ್ಷಣ ಸ್ಥಳಾಂತರ ಮಾಡಲು ಸೂಚಿಸಿದರು. ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ನಷ್ಟ, ಜೀವಹಾನಿ, ಮನೆ ಬಿದ್ದು ಹೋಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಂದ ಅಂಕಿ-ಅಂಶ ಕೇಳಲಾಗಿದೆ ಎಂದರು.
ಇಂದು ಮತ್ತು ನಾಳೆ ಇದ್ದು, ಹಾನಿಯಾಗಿರುವ ಕೆಲ ಸ್ಥಳಗಳಿಗೆ ನಾನೇ ಖುದ್ದು ಭೇಟಿ ನೀಡಿ ಅಂಕಿ-ಅಂಶ ಪಡೆಯುತ್ತೇನೆ. ಜಿಲ್ಲೆಯ ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿದೆ. ಹಾಸನ ಜಿಲ್ಲೆಯಲ್ಲಿ 196ಕ್ಕೂ ಹೆಚ್ವು ಮನೆ ಕುಸಿದಿವೆ. ಮಳೆಯಿಂದ ಓರ್ವ ಸಾವನ್ನಪ್ಪಿದ್ದಾನೆ. 2 ಹಸುಗಳು ಮೃತಪಟ್ಟಿವೆ. ಸಕಲೇಶಪುರದ ಯಸಳೂರು ಪೊಲೀಸ್ ಠಾಣೆ ಜಖಂಗೊಂಡಿದೆ. ರೈತರ 2100 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ನಷ್ಟವಾಗಿದೆ. 779 ಹೆಕ್ಟೇರ್ ಪ್ರದೇಶದಲ್ಲಿ ಮಳೆ ನೀರಿನಿಂದ ಭತ್ತ ನಾಶವಾಗಿದೆ ಎಂದರು.