ಹಾಸನ: ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್ಮೆನ್ಗಳ ಹೊರ ಗುತ್ತಿಗೆ ರದ್ದುಪಡಿಸಿ ಪೌರ ಕಾರ್ಮಿಕರ ಮಾದರಿಯಲ್ಲಿ ಕಾಯಂ ಮಾಡುವಂತೆ ಒತ್ತಾಯಿಸಿ ನಗರಸಭೆ ಎದುರು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರ ಗುತ್ತಿಗೆ ವಾಹನ ಚಾಲಕರ ಸಂಘದಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ರಾಜ್ಯದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಹಲವಾರು ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್‌ಮೆನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಈ ಎರಡು ವಿಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರಗಳ ಸ್ವಚ್ಛತೆ ನಿರ್ವಹಣೆಯಲ್ಲಿ ತ್ಯಾಜ್ಯ ಸಾಗಾಣಿಕೆ ಚಾಲಕರ ಪಾತ್ರ ದೊಡ್ಡದಾಗಿದ್ದು, ಪೌರಕಾರ್ಮಿಕರು ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ವಾಟರ್‌ಮೆನ್‌ಗಳು ಸಹ ಯಾವುದೇ ಸೇವಾ ಭದ್ರತೆಯಿಲ್ಲದೆ ಕನಿಷ್ಠ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಆಧಾರಿತ ನೌಕರರನ್ನು ನೇರ ವೇತನಕ್ಕೆ ಒಳಪಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಇದರಿಂದ ಸರ್ಕಾರ ಅನಗತ್ಯವಾಗಿ ಜಿಎಸ್ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ 100 ಕೋಟಿಗೂ ಹೆಚ್ಚಿನ ಹಣ ಉಳಿತಾಯವಾಗಲಿದೆ. ಇದಲ್ಲದೆ ಹೊರ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಸೇವಾ ಶುಲ್ಕ ಉಳಿಯಲಿದೆ. ಹೊರ ಗುತ್ತಿಗೆ ಪದ್ಧತಿ ರದ್ದು ಮಾಡಿ ಕಾಯಂಗೊಳಿಸುವಂತೆ ನಗರಸಭೆಗೆ ಮನವಿ ಮಾಡಿದರು.