ಸಕಲೇಶಪುರ(ಹಾಸನ): ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸದಿದ್ದಲ್ಲಿ ಬಹುಜನ ಸಮಾಜವಾದಿ ಪಕ್ಷದಿಂದ ದೇಶಾದ್ಯಾಂತ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ವಲಯ ಉಸ್ತುವಾರಿ ಗಂಗಾಧರ್ ಬಹುಜನ್ ತಿಳಿಸಿದ್ದಾರೆ.
ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ತಾಲೂಕು ಬಿಎಸ್ಪಿ ವತಿಯಿಂದ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನೇದಿನೇ ಪೆಟ್ರೋಲ್, ಡೀಸೆಲ್ ಬೆಲೆಯನ್ನ ಏರಿಸುತ್ತಿರುವುದು ಜನವಿರೋಧಿ ನೀತಿಯಾಗಿದೆ. ಇಡೀ ಜಗತ್ತಿನಾದ್ಯಂತ ಕೊರೊನಾ ವೈರಸ್ನಿಂದಾಗಿ ಹಲವರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಒಂದು ತುತ್ತು ಅನ್ನಕ್ಕೂ ಜನರು ಪರಿತಪಿಸುತ್ತಿದ್ದಾರೆ. ಹೀಗಿರುವಾಗ ಕಚ್ಚಾ ತೈಲ ಬೆಲೆ ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತಲುಪಿದ್ದರೂ, ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಲೇ ಇದೆ.
ಇದರಿಂದ ಕ್ಯಾಬ್ ಚಾಲಕರು, ಗೂಡ್ಸ್ ವಾಹನ ಹೊಂದಿರುವವರ ಪರಿಸ್ಥಿತಿ ಚಿಂತಾಜನಕವಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾದ ತಕ್ಷಣ ಇತರ ಸರಕು ವಸ್ತುಗಳ ದರ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳ ದರ ಹೆಚ್ಚಾದಾಗ ಜನಸಾಮಾನ್ಯರಿಗೆ ಸರಕುಗಳನ್ನ ಕೊಳ್ಳುವಶಕ್ತಿ ಇರುವುದಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದ ತಕ್ಷಣ ರೈತರು ಬಳಸುವ ಟ್ರಾಕ್ಟರ್ ಮತ್ತು ಟಿಲ್ಲರ್‌ಗಳ ಬಾಡಿಗೆ ದರ ಹೆಚ್ಚಾಗುತ್ತದೆ. ಡೀಸೆಲ್ ಯಂತ್ರಗಳ ಮೂಲಕ ನೆಡೆಯುತ್ತಿರುವ ಕಾರ್ಖಾನೆಗಳು ಸಂಕಷ್ಟ ಅನುಭವಿಸಿ, ತಾವು ಉತ್ಪಾದಿಸಿದ ಉತ್ಪನ್ನಗಳ ಬೆಲೆಗಳನ್ನ ಅನಿರ್ವಾಯವಾಗಿ ಹೆಚ್ಚು ಮಾಡುತ್ತವೆ ಎಂದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಿ, ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ದೊರಕುವಂತೆ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರುವ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನ ಇಳಿಸಿ ಅಗತ್ಯ ವಸ್ತುಗಳು ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ತಲುಪುವಂತೆ ನೀತಿ ರೂಪಿಸಬೇಕು ಎಂದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನ ತಹಶೀಲ್ದಾರ್ ಮಂಜುನಾಥ್ ಅವರಿಗೆ ನೀಡಲಾಯಿತು.