ಅರಕಲಗೂಡು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಂದಿನಿಂದ ಜು. 31ರವರೆಗೆ ಪ್ರತಿ ದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಕೊಣನೂರಿನಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲು ವರ್ತಕರ ಸಂಘ ನಿರ್ಧರಿಸಿದೆ.
ಇಲ್ಲಿನ ಲಯನ್ಸ್ ಶಾಲೆಯಲ್ಲಿ ವರ್ತಕರ ಸಂಘವು ಈ ಸಂಬಂಧ ವಿಶೇಷ ಸಭೆ ಕರೆದು ಈ ನಿರ್ಧಾರ ಕೈಗೊಂಡಿದೆ. ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಹ ಆರೋಗ್ಯ ಇಲಾಖೆಯ ಜೊತೆಗೆ ಕೈಜೋಡಿಸಬೇಕಿರುವುದರಿಂದ ಸ್ವಯಂಪ್ರೇರಿತ ಲಾಕ್ಡೌನ್ ನಿರ್ಧಾರದ ಅವಶ್ಯಕತೆ ಇದೆ ಎಂಬ ಸಾಮೂಹಿಕ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿತು.
ಈ ವೇಳೆ ಸಮುದಾಯ ಆರೋಗ್ಯ ನಿರೀಕ್ಷಕ ಎಂ.ಆರ್.ಆನಂದಗೌಡ ಮಾತನಾಡಿ, ಪ್ರತಿ ಅಂಗಡಿಯವರು ಬಹಳ ಎಚ್ಚರಿಕೆಯಿಂದ ವ್ಯಾಪಾರ ವಹಿವಾಟು ನಡೆಸಬೇಕು. ಯಾವುದೇ ಗಿರಾಕಿಗಳು ಅಂಗಡಿಗೆ ಬಂದರೂ ಮೊದಲು ಅವರು ಮಾಸ್ಕ್ ಹಾಕಿದ್ದಾರಾ ಗಮನಿಸಿ. ನಂತರ ಅವರ ಕೈಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಇಲ್ಲದೇ ಬಂದವರನ್ನು ದಯವಿಟ್ಟು ವಾಪಸ್ ಕಳಿಸಿ. ಅಂಗಡಿಗಳ ಬಳಿ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳುವಂತೆ ಸೂಚಿಸಿ ಎಂದರು.