ಹಾಸನ/ಸಕಲೇಶಪುರ: ಹಾಸನ ಕೇವಲ ಶಿಲ್ಪಕಲೆಗಳಿಗೆ ಮಾತ್ರ ಪ್ರಸಿದ್ಧಿಯಾಗಿಲ್ಲ, ಧುಮ್ಮಿಕ್ಕಿ ಹರಿಯುವ ಜಲಪಾತಗಳಿಂದ ಹಿಡಿದು ಹಸಿರ ಹೊದಿಕೆ ಹೊದ್ದಿರುವ ಪರ್ವತಶ್ರೇಣಿಗಳು ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಜಿಟಿ ಜಿಟಿ ಮಳೆ ಹನಿಯೊಂದಿಗೆ, ಹಚ್ಚ ಹಸಿರಿನ ನಡುವಿನ ಹಿಮ ಸಿಂಚನದಲ್ಲಿ, ಭುವಿ ಮತ್ತು ಆಗಸವನ್ನು ಒಂದಾಗಿಸುವ ಬಿಳಿ ಮೋಡಗಳೊಂದಿಗೆ, ಕಾಫಿಯ ಘಮವನ್ನು ಆಸ್ವಾದಿಸುತ್ತ ಮಲೆನಾಡಿನ ನಿಸರ್ಗ ಸೌಂದರ್ಯವನ್ನು ಸವಿಯುವ ಮಜಾವೇ ವಿಭಿನ್ನವಾಗಿರುತ್ತದೆ.
ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಬಿಸಿಲೆ ಘಾಟ್ ಕೂಡ ಮಹತ್ವ ಹೊಂದಿದ್ದು, ಇದೀಗ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಸಮೀಪದ ಬಿಸಿಲೆಯಲ್ಲಿ 40 ಹೆಕ್ಟೇರ್ ಮೀಸಲು ಅರಣ್ಯ ಇದೆ. ಇದನ್ನು ಏಷ್ಯಾದಲ್ಲಿಯೇ ಪ್ರಮುಖ ಅರಣ್ಯ ಪ್ರದೇಶ ಅಂತ ಗುರುತಿಸಲಾಗಿದೆ. ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬಿಸಿಲೆ ಘಾಟ್ ಪ್ರದೇಶದ ಸುತ್ತಮುತ್ತ ಪುಷ್ಪಗಿರಿ ಬೆಟ್ಟ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ ಬೆಟ್ಟ ಮತ್ತು ಕನ್ನಡಿ ಕಲ್ಲು ಬೆಟ್ಟಗಳನ್ನು ಮುಂಗಾರು ಮಳೆಯ ಸಂದರ್ಭದಲ್ಲಿ ನೋಡಿದ್ರೆ ಎಂಥವರಿಗೂ ಸಂತಸ ಉಂಟಾಗುತ್ತದೆ.
ಈಗ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಜೊತೆಗೆ ಹಾಸನ ಮತ್ತು ಮಂಗಳೂರಿಗೆ ಹೋಗುವ ಪ್ರಮುಖ ದಾರಿ ಶಿರಾಡಿ ಘಾಟ್ ತಾತ್ಕಾಲಿಕವಾಗಿ ಬಂದ್ ಆದ ಹಿನ್ನೆಲೆಯಲ್ಲಿ ಎಲ್ಲರೂ ಬಿಸಿಲೆ ಘಾಟ್ ಮೂಲಕವೇ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಪ್ರವಾಸಿಗರ ದಂಡೇ ಬಿಸಿಲಿಗೆ ಹರಿದು ಬರುತ್ತಿದ್ದು, ಸೌಂದರ್ಯ ಪ್ರಿಯರಿಗೆ ರಸದೂಟ ಉಣಬಡಿಸುತ್ತಿದೆ.
ಇಲ್ಲಿ ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ.