ಹಾಸನ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಜಾರಿಗೆ ತರುವಂತೆ ಅರಸೀಕೆರೆ ತಾಲೂಕಿನ ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶಶಿಶೇಖರ್ ಸಿದ್ದ ಬಸವ ಸ್ವಾಮೀಜಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಗೋವು ಕಳ್ಳ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವಾರು ಅಕ್ರಮ ಕಸಾಯಿಖಾನೆಗಳಲ್ಲಿ ನಿರಂತರ ಗೋಹತ್ಯೆ ನಡೆಯುತ್ತಿದೆ. ಗೋರಕ್ಷಾ ಕಾರ್ಯಕರ್ತರು ಜೀವದ ಹಂಗು ತೊರೆದು ಸಾವಿರಾರು ಗೋವುಗಳ ರಕ್ಷಣೆ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಗೋ ಸಂಬಂಧಿ ಅಪರಾಧಿಗಳ ಮೇಲೆ ಮೊಕದ್ದಮೆ ಹಾಕಿ ದಸ್ತಗಿರಿ ಮಾಡಲಾಗುತ್ತಿದೆ. ಹಾಗೇ ನಮ್ಮ ಸಂಸ್ಥೆ ಹಲವಾರು ಗೋವುಗಳ ರಕ್ಷಣೆ ಮಾಡಿದೆ. ಈ ಗೋವುಗಳು ಮತ್ತೆ ಗೋ ಹಂತಕರ ಕೈ ಸೇರದ ಹಾಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡಲಾಗುತ್ತದೆ ಎಂದರು.
ಅಪರಾಧಿಗಳ ಮೇಲೆ ಕೇಸ್ ದಾಖಲಾದರೂ ಒಬ್ಬನೇ ಒಬ್ಬ ಆರೋಪಿಗೆ ಶಿಕ್ಷೆ ಆದ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ. ಇದಕ್ಕೆಲ್ಲ ಕಾರಣ ಈಗ ಜಾರಿಯಲ್ಲಿರುವ ಕರ್ನಾಟಕ ಗೋವಧೆ ನಿಷೇಧ ಹಾಗೂ ಜಾನುವಾರು ಸಂರಕ್ಷಣೆ ಕಾಯಿದೆ 1964. ಇದು ಅತ್ಯಂತ ದುರ್ಬಲ ಕಾಯಿದೆಯಾಗಿದೆ. ಅಪರಾಧವನ್ನು ತಡೆಯಲು ಸಂಪೂರ್ಣ ವಿಫಲಗೊಂಡಿದೆ. ಈ ಕಾಯಿದೆಯಲ್ಲಿ ಗೋವಧೆ ಮಾಡಿದವರಿಗೆ ಕೇವಲ 6 ತಿಂಗಳವರೆಗೆ ಶಿಕ್ಷೆ ಇದೆ. ಗರಿಷ್ಠ 1000 ರೂ.ವರೆಗೆ ಮಾತ್ರ ದಂಡ ವಿಧಿಸಲು ಅವಕಾಶವಿದೆ ಹಾಗೂ ಅಪರಾಧಿಗಳಿಗೆ ಠಾಣೆಯಲ್ಲಿ ಜಾಮೀನು ದೊರೆಯುತ್ತದೆ. ಆರೋಪಿಗಳು ಜಾಮೀನಿನಲ್ಲಿ ಹೊರ ಬಂದ ಮೇಲೆ ಮತ್ತೆ ಮತ್ತೆ ಅದೇ ಅಪರಾಧ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅಪರಾಧಗಳನ್ನು ನಿಲ್ಲಿಸಿ ಗೋವುಗಳ ಸಂಪೂರ್ಣ ರಕ್ಷಣೆಗೆ ಪ್ರಬಲವಾದ ಗೋವಧೆ ನಿಷೇಧ ಕಾಯ್ದೆಯನ್ನು ಇದೇ ಸೆಪ್ಟೆಂಬರ್ ಅಧಿವೇಶನದಲ್ಲಿ ತರಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮ ಸಂಸ್ಥೆಯು ಆಗ್ರಹಿಸುವುದಾಗಿ ಹೇಳಿದರು. ಕಾಯಿದೆಯಲ್ಲಿ ಗೋವಧೆ ಮಾಡಿದವರಿಗೆ ಗರಿಷ್ಠ 10 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿರಬೇಕು. ಅಕ್ರಮ ಗೋ ಸಾಗಾಟಕ್ಕೆ ಉಪಯೋಗಿಸುವ ವಾಹನ ಶಾಶ್ವತ ಮುಟ್ಟುಗೋಲು ಹಾಕಬೇಕು, ಚಾಲಕನ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡಬೇಕು, ಖಾಸಗಿ ದನದ ಸಂತೆಗಳನ್ನು ನಿಷೇಧಿಸಲು ಅವಕಾಶವಿರಬೇಕು ಎಂದು ತಮ್ಮ ಮನವಿಯಲ್ಲಿ ಆಗ್ರಹಿಸಿದರು.