ಹಾಸನ: ನಗರದ ಬಡಾವಣೆ ಠಾಣೆ ಪಿಎಸ್‌ಐ ವಿನೋದ್ ರಾಜ್ ಅವರಿಗೆ ಹೆಚ್ಚುವರಿಯಾಗಿ ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ಆಗಿ ಜವಾಬ್ದಾರಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಪ್ರಭಾರಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಎಸ್ಪಿ ಅವರು ಸೂಚಿಸಿದ್ದಾರೆ. ಈ ಹಿಂದೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲೇ ಸುಮಾರು ಒಂದು ವರ್ಷ ಕಾಲ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದ್ದ ವಿನೋದ್ ರಾಜ್, ಖಡಕ್ ಕಾರ್ಯವೈಖರಿ ಮೂಲಕ ಉತ್ತಮ ಕೆಲಸ ಮಾಡಿದ್ದರು.
ಇನ್ನು ಅದಾದ ಬಳಿಕ ಬಡಾವಣೆ ಠಾಣೆ ಜವಾಬ್ದಾರಿ ವಹಿಸಿಕೊಂಡ ನಂತರ ಹಲವು ಅಪರಾಧ ಪ್ರಕರಣ ಪತ್ತೆ ಮಾಡುವ ಮೂಲಕ ದಕ್ಷ ರೀತಿಯಲ್ಲಿ ಕೆಲಸ ಮಾಡಿದ್ದರು. ಮುಂದೆಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಪ್ರಮೋದ್ ಅವರಿಗೂ ಜವಾಬ್ದಾರಿ:
ಇದೇ ರೀತಿ ಹಾಸನ ಸಂಚಾರ ಠಾಣೆಯ ಪಿಎಸ್‌ಐ ಪ್ರಮೋದ್ ಕುಮಾರ್ ಅವರಿಗೆ ಹಾಲಿ ಕರ್ತವ್ಯದ ಜೊತೆಗೆ ಮುಂದಿನ ಆದೇಶದವರೆಗೆ ಹಾಸನ ಬಡಾವಣೆ ಠಾಣೆ ಪಿಎಸ್‌ಐ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಿ ಆದೇಶ ಹೊರಡಿಸಲಾಗಿದೆ.