ಹಾಸನ: ಬೇಲೂರು ತಾಲ್ಲೂಕಿನ ಶಿವಯೋಗಿಪುರದ ಕೆರೆಯನ್ನು ರೈತರಿಗೆ, ದನಕರುಗಳಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮಾದೀಹಳ್ಳಿ, ಹೋಬಳಿ ಶಿವಯೋಗಿಪುರ ಗ್ರಾಮದ ಸರ್ವೆ ನಂ.59 ರಲ್ಲಿ 1 ಎಕರೆ 1 ಗುಂಟೆ ಭೂಮಿ ಇದ್ದು, ಇದು ಗ್ರಾಮದ ಪಂಚಕಟ್ಟೆ ಕೆರೆಯಾಗಿದೆ. ಮೂಲ ದಾಖಲಾತಿಗಳಲ್ಲಿ ಕೆರೆ ಅಂತ ಇದ್ದು, ಇಲ್ಲಿಯವರೆಗೆ ಕೆರೆಯಾಗಿ ಉಪಯೋಗಿಸಲಾಗಿದೆ. ಆದರೆ ಇತ್ತೀಚೆಗೆ ಬೇಲೂರು ತಾಲೂಕು ಕಸಬಾ ಹೋಬಳಿಯ ಪ್ರಸಾದೀಹಳ್ಳಿ ಗ್ರಾಮದ ನಿಂಗೇಗೌಡರ ಮಗ ಪದ್ಮೇಗೌಡ ಹಾಗೂ ಹಾಸನ ತಾಲೂಕು ಕಟ್ಟಾಯ ಗ್ರಾಮದ ಅಶೋಕ್ ಎಂಬುವರು ಎರಡು ಜೆಸಿಬಿ ಮತ್ತು ಎರಡು ಟ್ರಾಕ್ಟರ್ ತಂದು ಏಕಾಏಕಿ ಕೆರೆಯನ್ನು ಮುಚ್ಚಲು ಬಂದಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆರೆ ಜಾಗವನ್ನು ಕ್ರಯಕ್ಕೆ ಪಡೆದಿರುತ್ತೇವೆ ಎಂದು ತಿಳಿಸಿದ್ದಾರೆ. 1975-76 ರಲ್ಲಿ ಹಗರೆ ಗ್ರಾಮದ ಮಂಜಶೆಟ್ಟಿ ಬಿನ್ ತಿಮ್ಮಶೆಟ್ಟಿ ಎಂಬುವವರಿಗೆ ಅಂದಿನ ಬೇಲೂರು ತಹಶೀಲ್ದಾರ್ ಅವರು ಮಂಜೂರು ಮಾಡಿದ್ದು, ಅವರು ಇಲ್ಲಿಯವರೆಗೆ ಈ ಜಾಗದ ಅನುಭವಕ್ಕೆ ಬಂದಿರುವುದಿಲ್ಲ ಎಂದು ಹಿನ್ನೆಲೆ ವಿವರಿಸಿದರು.
ಈ ಹಿಂದೆಯೇ ಬೇಲೂರು ತಹಸೀಲ್ದಾರ್‌ಗೆ ಈ ವಿಚಾರವಾಗಿ ದೂರನ್ನು ನೀಡಿ ಮನವಿ ಮಾಡಲಾಗಿತ್ತು. ಸಕಲೇಶಪುರದ ಅಂದಿನ ಉಪ ವಿಭಾಗಾಧಿಕಾರಿಗೂ ಸಹ ದೂರನ್ನು ನೀಡಲಾಗಿತ್ತು. ಈಗ ಸ್ಥಳದ ದಾಖಲೆಗಳನ್ನು ಪರಿಶೀಲನೆ ಮಾಡಿ ಮತ್ತು ಕೆಲ ಖಾಸಗಿ ವ್ಯಕ್ತಿಗಳಿಗೆ ಆಗಿರುವ ಮಂಜೂರಾತಿ ರದ್ದುಪಡಿಸಿ, ಕೆರೆ ಎಂದು ಮಂಜೂರು ಮಾಡಿ ಯೋಗಿಪುರ ಗ್ರಾಮದ ರೈತರಿಗೆ, ದನಕರುಗಳಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಿಕೊಡುವಂತೆ ಮನವಿ ಮಾಡಿದರು.