ಹಾಸನ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕುಟುಂಬ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆದರು.
ಹಾಸನಾಂಬೆ ಹಾಗೂ ದರ್ಬಾರ್ ಗಣಪತಿ, ಶ್ರೀ ಸಿದ್ದೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇವಸ್ಥಾನದಲ್ಲಿ ಪೂಜಾ ಕಾರ್ಯ, ದೇವಿಯ ದರ್ಶನದಿಂದ ಧನ್ಯರಾಗಿದ್ದೇವೆ. ದೇವಸ್ಥಾನದಲ್ಲಿ ದರ್ಶನ ವ್ಯವಸ್ಥೆ ಚೆನ್ನಾಗಿದೆ. ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಕಲ್ಪಿಸಿದೆ ಎಂದು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ವಿಜಯಭಾಸ್ಕರ್ ಪ್ರಶಂಸಿದರು. ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುವುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಗೊತ್ತುಪಡಿಸಿರುವ ಸ್ಥಳಕ್ಕೂ ಭೇಟಿ ನೀಡುವುದಾಗಿ ಹೇಳಿದರು.
ಹಾಸನಾಂಬೆ ದರ್ಶನ ಪಡೆದ ಮೋಟಮ್ಮ:
ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ್ರು. ನಂತರ ದರ್ಬಾರ್ ಗಣಪತಿ ಮತ್ತು ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಹಾಸನಾಂಬೆ ದರ್ಶನಕ್ಕೆ ಬಂದು ಹೋಗುತ್ತಿದ್ದೇನೆ. ದೇವಿಯಲ್ಲಿ ಒಂದು ಶಕ್ತಿಯಿದೆ. ರಾಜ್ಯದಲ್ಲಿ ಯಾವ ಅವಘಡಗಳು ಸಂಭವಿಸಬಾರದು. ದೇವಿ ರಾಜ್ಯದ ಜನರನ್ನು ರಕ್ಷಣೆ ಮಾಡಲಿ. ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಹೇಳಿದರು. ಯೋಗಾನುಸಾರ ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಮೈತ್ರಿ ಸರ್ಕಾರ ಬೀಳುವುದಕ್ಕೆ ಕಾರಣ ಹೇಳುವುದಿಲ್ಲ. ನಾನು ದೇವಿ ದರ್ಶನಕ್ಕೆ ಬಂದಿದ್ದೇನೆ ಅಷ್ಟೆ ಎಂದ್ರು. ಉಪ ಚುನಾವಣೆ ಪ್ರಚಾರಕ್ಕೆ ನಾನು ಕೂಡ ಹೋಗುತ್ತೇನೆ. ಮಹಾರಾಷ್ಟ್ರ, ಹರಿಯಾಣ ಚುನಾವಣೆ ಫಲಿತಾಂಶ ರಾಜ್ಯದ ಉಪ ಚುನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಜನರು ಯಾವ ತೀರ್ಮಾನ ಮಾಡುತ್ತಾರೆ ಅದಕ್ಕೆ ತಲೆ ಬಾಗಲೇಬೇಕು ಎಂದರು.