ಚನ್ನರಾಯಪಟ್ಟಣ (ಹಾಸನ): ದೇಶಾದ್ಯಂತ ಕೊರೊನಾ ಲಸಿಕಾಕರಣ ಕಾರ್ಯ ಪ್ರಾರಂಭವಾಗಿದೆ. ಇಂದು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೂರು ಜನ ಕೊರೊನಾ ವಾರಿಯರ್ಸ್ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಯಿತು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮೊದಲ ಲಸಿಕೆಯನ್ನು ವೈದ್ಯ ಮಹೇಶ್ ಅವರಿಗೆ ನೀಡುವ ಮೂಲಕ ಚಾಲನೆ ದೊರಕಿತು. ಆ ಬಳಿಕ ಇನ್ನೂ ಅನೇಕ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಯಿತು. ವೈದ್ಯರ ಸೂಚನೆ ಮೇರೆಗೆ ಲಸಿಕೆ ಪಡೆದುಕೊಂಡವರ ಮೇಲೆ ಅರ್ಧ ಗಂಟೆ ಕಾಲ ನಿಗಾ ವಹಿಸಲಾಯಿತು.
ಇಂದು ವ್ಯಾಕ್ಸಿನ್ ಪಡೆದ ವ್ಯಕ್ತಿಗಳು ಇನ್ನು 4 ವಾರದಲ್ಲಿ ಮತ್ತೆ ಅದೇ ಕಂಪನಿಯ ಇನ್ನೊಂದು ಡೋಸ್ ಪಡೆಯಬೇಕು ಎಂದು ವೈದ್ಯರು ಮಾಹಿತಿ ನೀಡಿದರು.
"ಇಂದು ಜಿಲ್ಲೆಯಲ್ಲಿ ಒಟ್ಟು ಹತ್ತು ಸ್ಥಳಗಳನ್ನು ಗುರುತಿಸಿ 7 ತಾಲೂಕುಗಳಲ್ಲಿ ಲಸಿಕೆ ನೀಡುತ್ತಿದ್ದಾರೆ. ಹಾಗಾಗಿ ಇಂದು ನಾನು ಮೊದಲು ವ್ಯಾಕ್ಸಿನ್ ಪಡೆದುಕೊಂಡಿದ್ದೇನೆ. ನಂತರ ನಮ್ಮ ಎಲ್ಲ ಸಿಬ್ಬಂದಿಗಳೂ ವ್ಯಾಕ್ಸಿನ್ ತೆಗೆದುಕೊಳ್ಳುತ್ತಾರೆ." ಎಂದು ಡಾಕ್ಟರ್ ಮಹೇಶ್ ತಿಳಿಸಿದರು.
ವ್ಯಾಕ್ಸಿನೇಷನ್ ಉದ್ಘಾಟಿಸಿ ಮಾತನಾಡಿದ ಸಿ.ಎನ್. ಬಾಲಕೃಷ್ಣ, ಜಿಲ್ಲೆಯಲ್ಲಿ ಯಾರಿಗೂ ಯಾವುದೇ ಭಯ ಬೇಡ. ವ್ಯಾಕ್ಸಿನ್ ಪಡೆಯುವುದರಿಂದ ಪಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರದ ಆದೇಶ ಬಂದ ಮೇಲೆ ನಾವೂ ತೆಗೆದುಕೊಳ್ಳುತ್ತೇವೆ ಎಂದರು.