ಹಾಸನ: ಸಂವಿಧಾನಬದ್ಧವಾಗಿ ದೇಶದ ಗೌರವ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ದೇಶದ ಸಣ್ಣ ಮಗುವಿಗೂ ಕೂಡಾ ಭಾರತ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಭಾರತ ಎಂದು ತಿಳಿದಿದೆ. ಇದು ಸಂವಿಧಾನವಾಗಿ ಬಂದಿದೆ ಎಂದರು.
ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಡೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಮಾತನಾಡುತ್ತಾ, ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದೆ. ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರು. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ಹೆಸರು ಬದಲಾವಣೆಗೆ ಆಕ್ಷೇಪಿಸಿದ್ದರು. ಕನಕಪುರದಲ್ಲಿ ಮಾತನಾಡಿದ್ದ ಅವರು, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾವನ್ನು ರಿಪಬ್ಲಿಕ್ ಆಫ್ ಭಾರತ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ದೇಶದ ಹೆಸರು ಬದಲಾವಣೆಗಿಂತ ಜನರ ಬದುಕು ಬದಲಾವಣೆ ಮುಖ್ಯ: ಡಿಸಿಎಂ ಡಿ.ಕೆ.ಶಿವಕುಮಾರ್
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇಂಡಿಯಾ ಹೆಸರು ಬದಲಾವಣೆಗೆ X ಖಾತೆಯಲ್ಲಿ ಪೋಸ್ಟ್ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂಬ ಹೆಸರಿಟ್ಟ ಕಾರಣಕ್ಕೆ ಕೇಂದ್ರ ಸರ್ಕಾರ ದೇಶದ ಹೆಸರನ್ನು 'INDIA' ಬದಲು 'ಭಾರತ' ಎಂದು ಬದಲಾಯಿಸಲು ಮುಂದಾಗಿದೆ. INDIA ಮೈತ್ರಿಕೂಟದ ಬಗ್ಗೆ ಬಿಜೆಪಿಯವರಿಗೆ ಇಷ್ಟೊಂದು ಭಯವೇ?. ದೇಶದ ಹೆಸರು ಮರುನಾಮಕರಣಕ್ಕೆ 'INDIA' ಮೈತ್ರಿಕೂಟದ ಮೇಲಿನ ಭಯವಲ್ಲದೆ ಮತ್ತೇನು ಕಾರಣ ಮೋದಿಯವರೇ?. INDIA ಹೆಸರನ್ನು 'ಭಾರತ' ಎಂದು ಬದಲಿಸಿದರೆ ದೇಶ ಬದಲಾಗಲಿದೆಯೇ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: 'ದೇಶದ ಹೆಸರು ಬದಲಾವಣೆ.. ಒಂದು ರಾಷ್ಟ್ರ, ಒಂದು ಚುನಾವಣೆಯ ಮಸೂದೆ ತಂದರೆ ರಾಜ್ಯಸಭೆಯಲ್ಲಿ ತಡೆ'