ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಶಾಸಕ ಹೆಚ್. ಡಿ. ರೇವಣ್ಣ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ, ಸಣ್ಣ ಸಮಸ್ಯೆಗಳ ಕಾರಣ ಹೇಳಿಕೊಂಡು ಯಾವುದೇ ಕಾಮಗಾರಿಗಳನ್ನು ಕುಂಠಿತಗೊಳಿಸಬಾರದು ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಮಳೆಗಾಲ ಆರಂಭಕ್ಕೂ ಮುನ್ನ ರೈತರಿಗೆ ಗಿಡಗಳನ್ನು ಕೊಟ್ಟು ಅವುಗಳನ್ನು ತಮ್ಮ, ತಮ್ಮ ಜಮೀನುಗಳಲ್ಲಿ ಬೆಳೆಸುವಂತೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆಯನ್ನು ಅರಿತು ಈಗಿನಿಂದಲೇ ಸೂಕ್ತ ತಯಾರಿ ಮಾಡಿಕೊಂಡು, ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಸಲಹೆ ನೀಡಿದರು.
ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವಂತೆ ಹೇಳಿದರಲ್ಲದೆ, ಕೆಪಿಟಿಸಿಎಲ್‍ಗೆ ಸಂಬಂಧಿತ ಸಮಸ್ಯೆಗಳು ಅಥವಾ ದೂರುಗಳಿದ್ದಲ್ಲಿ ತುರ್ತಾಗಿ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಸಂಭವಿಸುವ ಅನಾಹುತಗಳಿಗೆ ಪಿಡಿಒ ಹಾಗೂ ಅಧಿಕಾರಿಗಳೇ ಜವಾಬ್ದಾರರೆಂದು ಎಚ್ಚರಿಸಿದರು.
ದುದ್ದ ಹಾಗೂ ಶಾಂತಿಗ್ರಾಮ ಹೋಬಳಿ ಕುಡಿಯುವ ನೀರಿಗೆ ₹ 206 ಕೋಟಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ವರದಿ ನೀಡುವಂತೆ ಪಿಆರ್ಇಡಿ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದರು.
ಗ್ರಾಮಗಳ ಪೆಟ್ಟಿಗೆ ಅಂಗಡಿಗಳಿಂದ, ರಾಷ್ಟ್ರೀಯ ಹೆದ್ದಾರಿವರೆಗೆ ನಾಯಿಕೊಡೆಗಳಂತೆ ಹಬ್ಬಿರುವ ಅನಧಿಕೃತ ಮದ್ಯ ಮಾರಾಟಗಾರರ ವಿರುದ್ಧ ಹಾಗೂ ಬೆಳ್ಳಂಬೆಳಗ್ಗೆ ತೆರೆಯುವ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆಯ ಹೆಗ್ಗಳಿಕೆಯನ್ನು ಈ ಬಾರಿಯೂ ಉಳಿಸಿಕೊಳ್ಳಲು ಶ್ರಮಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರವಾಗಿ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.