ಹಾಸನ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಡವ-ಶ್ರೀಮಂತ ಎಂದು ಭೇದ-ಭಾವ ಮಾಡಿ ಆಹಾರ ಸಾಮಗ್ರಿಗಳನ್ನು ಹಂಚಿದ್ದಾರೆ ಎಂದು ರೊಚ್ಚಿಗೆದ್ದ ಜನರು, ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಸನದ ಹಳೇಬೀಡಿನಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಇಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಪಟ್ಟಣದಲ್ಲಿ ಅಸಂಘಟಿತ ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲು ಮುಂದಾಗಿದ್ದರು. ಈ ವೇಳೆ ಜನ ಮುಗಿಬಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಕಾರ್ಮಿಕರು ಕೂಗಾಡಿ ವಿತರಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಿಬಿಟ್ಟರು.
ಆಹಾರ ಸಾಮಗ್ರಿಗಳನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಲಾಗುತ್ತಿದೆ ಎಂಬುದರ ಬದಲು ಗ್ರಾಮ ಪಂಚಾಯಿತಿಯ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿದು ಸಾವಿರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಆಹಾರ ಸಾಮಗ್ರಿಗಳನ್ನು ಪಡೆಯಲು ಹಲವಾರು ಜನ ಒಟ್ಟಾಗಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು. ಆಹಾರ ಸಾಮಗ್ರಿಗಳನ್ನು ಹೊತ್ತು ತಂದಿದ್ದ ಲಾರಿ ಕೆಲವರಿಗೆ ಸಾಮಗ್ರಿಗಳನ್ನು ನೀಡದೆ ವಾಪಸ್ ಹೋಗಿದ್ದರಿಂದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕೂಲಿ ಕಾರ್ಮಿಕರು ಹಿಡಿಶಾಪ ಹಾಕಿದರು.
ಸಾಮಗ್ರಿಗಳನ್ನು ಕೊಡುವುದಾದರೆ ಎಲ್ಲರಿಗೂ ಸಮಾನವಾಗಿಯೇ ನೀಡಲಿ. ಇಲ್ಲವಾದರೆ ಸಾಮಗ್ರಿಗಳನ್ನು ಕೊಡುವುದೇ ಬೇಡ. ನಾವು ಕೆಲಸವಿಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಅತಂತ್ರರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿತರಣೆ ಮಾಡಿ ಇತರರಿಗೆ ಹಂಚಿಕೆ ಮಾಡದಿರುವುದು ಬೇಸರದ ಸಂಗತಿ ಎಂದು ಕೆಲವರು ಸ್ಥಳದಲ್ಲಿಯೇ ಮುಖಂಡರ ಜೊತೆ ಗಲಾಟೆ ಮಾಡಿಕೊಂಡರು.