ಹಾಸನ/ಅರಕಲಗೂಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಸಿವಿನಿಂದ ಬಳಲಿ ಭಿಕ್ಷುಕನೋರ್ವ ಸಾವಿಗೀಡಾಗಿರೋ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ.
ಅಂದಾಜು 38-40 ವರ್ಷದ ವಯೋಮಾನದ ಅಪರಿಚಿತ ವ್ಯಕ್ತಿಯಾಗಿದ್ದು, ಕಳೆದ ಹಲವು ತಿಂಗಳಿಂದ ಎಪಿಎಂಸಿ ಆವರಣದಲ್ಲಿ ಆಶ್ರಯ ಪಡೆದಿದ್ದ. ಹತ್ತು ದಿನದಿಂದ ಕೊರೊನಾ ನಿಷೇಧಾಜ್ಞೆ ಜಾರಿಯಿದ್ದ ಪರಿಣಾಮ ಹೋಟೆಲ್ ಉದ್ಯಮ ಸೇರಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ನಗರದ ವಿವಿಧ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಭಿಕ್ಷೆ ಬೇಡಿ ತುತ್ತಿನ ಚೀಲವನ್ನು ತುಂಬಿಕೊಳ್ಳುತ್ತಿದ್ದ ಈತನಿಗೆ ಹತ್ತು ದಿನದಿಂದ ಭಿಕ್ಷೆ ಸಿಗದ ಹಿನ್ನೆಲೆಯಲ್ಲಿ ಸಾವಿಗೀಡಾಗಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ.
ಇನ್ನು ಶವದ ಮುಂಭಾಗದಲ್ಲಿದ್ದ ಆತನ ಊಟದ ಪಾತ್ರೆಯಲ್ಲಿ ತೆಂಗಿನಕಾಯಿಯ ಚೂರುಗಳು ಬಿದ್ದಿರುವುದನ್ನು ನೋಡಿದ್ರೆ, ಹೊಟ್ಟೆ ಹಸಿವಿನಿಂದ ತೆಂಗಿನಕಾಯಿಯನ್ನೇ ತಿಂದು ಬದುಕಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.