ಹಾಸನ: ಬಹುಚರ್ಚಿತ ಹಾಸನ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಸುಂಕ ಸಂಗ್ರಹ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಹತ್ವದ ಸಭೆ ನಡೆಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ಜಿಲ್ಲಾಧಿಕಾರಿ ಆರ್.ಗಿರೀಶ್, ರಸ್ತೆ ನಿರ್ಮಾಣದಲ್ಲಿನ ಲೋಪದೋಷಗಳು, ಇತರ ಮೂಲಭೂತ ಸೌಕರ್ಯಗಳ ಕೊರತೆಯನ್ನು 15 ದಿನಗಳೊಳಗೆ ಸರಿಪಡಿಸಿ ನಂತರವಷ್ಟೆ ಟೋಲ್ ಸಂಗ್ರಹಿಸುವಂತೆ ಕೆ.ಆರ್.ಡಿ.ಎಲ್ ಸಂಸ್ಥೆಗೆ ತಿಳಿಸಿದರು.
ಈ ಮಾರ್ಗದಲ್ಲಿ ಸಂಚರಿಸುವ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರಾಕ್ಟರ್ ಮತ್ತಿತರ ವಾಹನಗಳ ಹಾಗೂ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳಿಗೆ ಟೋಲ್ ಸಂಗ್ರಹಿಸುವಂತಿಲ್ಲ. ಬಸ್‍ಗಳಿಗೆ ಟ್ರಿಪ್ ಲೆಕ್ಕದಲ್ಲಿ ಟೋಲ್ ಸಂಗ್ರಹಿಸದೆ ದಿನದ ಲೆಕ್ಕದಲ್ಲಿ ಹಣ ಪಡೆಯಬೇಕು ಹಾಗೂ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಿಸಬಾರದು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
20 ಕಿ.ಮೀ ವ್ಯಾಪ್ತಿಯ ಗ್ರಾಮಸ್ಥರು ಮಾಸಿಕ 205 ರೂ ಪಾವತಿಸಿ ಪಾಸ್ ಪಡೆಯಬಹುದಾಗಿದೆ. ಇದು ವಿಶ್ವಬ್ಯಾಂಕ್ ನೆರವು ಪಡೆದು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಂಡ ಯೋಜನೆಯಾಗಿದ್ದು, 2017ರಲ್ಲಿ ರಾಜ್ಯದ 7 ರಸ್ತೆಗಳಿಗೆ ಟೋಲ್ ಸಂಗ್ರಹಕ್ಕೆ ಆದೇಶ ಮಾಡಲಾಗಿದೆ. ಹಾಗಾಗಿ ಅದನ್ನು ಪಾಲಿಸಬೇಕಾಗಿದೆ, ಆದರೆ ಅದಕ್ಕೆ ಮುನ್ನ ಎಲ್ಲಾ ಲೋಪಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಸಭೆಯಲ್ಲಿ ಹಾಸನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ರವಿ, ಮುಖಂಡ ಕೃಷೇಗೌಡ ಹಾಗೂ ರೈತ ಪ್ರತಿನಿಧಿಗಳು ವಿವಿಧ ಸಂಘಗಳ ಪ್ರಮುಖರು ಹಾಜರಿದ್ದು, ಈ ಮಾರ್ಗದಲ್ಲಿ ಸುಂಕ ವಿನಾಯಿತಿ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಬೇಕು ಹಾಗೂ ಲೋಪಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.