ಅರಕಲಗೂಡು (ಹಾಸನ): ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಮಾ.15ರಂದು ಕಾರಿನ ಸಮೇತ ವ್ಯಕ್ತಿ ಸುಟ್ಟು ಹಾಕಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಣನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳವಾಡಿಯ ಹಿರಿಕೆರೆ ಏರಿಯ ಮೇಲೆ ಕಾರೊಂದು ಸುಟ್ಟು ಕರಕಲಾಗಿ, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ವ್ಯಕ್ತಿಯ ಶವ ದೊರಕಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದ ಕೊಣನೂರು ಪೊಲೀಸರು 3 ಮಂದಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಚಾಲಕರುಗಳಾದ ಶಶಿಕುಮಾರ್ (30), ಶಿವ (28) ಹಾಗೂ ಯೋಗೇಶ್ (25) ಬಂಧಿತ ಆರೋಪಿಗಳು.
ಇದನ್ನೂ ಓದಿ: ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಪ್ರಕರಣ: 6 ಮಂದಿ ಬಂಧನ
ಪ್ರಕರಣ: ಕಾರಿನಲ್ಲಿ ಸುಟ್ಟು ಕರಕಲಾದ ಅನಿಲ್ ಕುಮಾರ್ ಮತ್ತು ಆರೋಪಿಗಳು ಸ್ನೇಹಿತರಾಗಿದ್ದರು. ಅನಿಲ್ ಕುಮಾರ್ ಆರೋಪಿಗಳ ಪತ್ನಿಯರ ಜೊತೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಆತನಿಗೆ ಮದ್ಯಪಾನ ಮಾಡಿಸಿ ನಂತರ ಆತನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ಅರಕಲಗೂಡು ತಾಲೂಕಿನ ಬೆಳವಾಡಿಯ ಕೆರೆಯ ಏರಿ ಮೇಲೆ ಕಾರು ನಿಲ್ಲಿಸಿ, ಕಾರಿನ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊಣನೂರು ಪೊಲೀಸರು ವಿಶೇಷ ತಂಡ ರಚಿಸಿ, ಮೊಬೈಲ್ ತಂತ್ರಾಂಶದ ಸಹಾಯದಿಂದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.