ಹಾಸನ: ಕ್ರಿಕೆಟ್ನ ಗಂಧ ಗಾಳಿ ತಿಳಿಯದ ಇವರು ಕ್ಷಣಾರ್ಧದಲ್ಲಿ ಬಹಳ ಅಚ್ಚುಕಟ್ಟಾಗಿ ಕ್ರಿಕೆಟ್ ಬ್ಯಾಟ್ ತಯಾರಿಸುತ್ತಾರೆ. ಇವರ ಕಲೆಯನ್ನು ಮೆಚ್ಚಿ ತಾಲೂಕಿನ ಎಲ್ಲೆಡೆಯಿಂದ ಕ್ರಿಕೆಟ್ ಪ್ರೇಮಿಗಳು ಆಗಮಿಸಿ ಇವರ ಬಳಿ ಕ್ರಿಕೆಟ್ ಬ್ಯಾಟ್ ಕೊಂಡೊಯ್ಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಹಾಸನಕ್ಕೆ ಬಂದು ತಮ್ಮಲ್ಲಿರುವ ಕಲೆಯನ್ನೇ ಬಂಡವಾಳ ಮಾಡಿಕೊಂಡ ಈ ಇಬ್ಬರು ಸಹೋದರರು ಮತ್ತು ಆತನ ಕುಟುಂಬ ತಾತ್ಕಾಲಿಕ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ. ಹಾಸನದ ಬಿಎಂ ರಸ್ತೆಯ ಸರ್ಕಾರಿ ಇಂಜಿನಿಯರ್ ಕಾಲೇಜು ಮುಂಭಾಗ ತಾತ್ಕಾಲಿಕವಾಗಿ ಟೆಂಟ್ ವಾಸವಿದ್ದಾರೆ. ಪ್ರತಿನಿತ್ಯ ಕ್ರಿಕೆಟ್ ಬ್ಯಾಟ್ ತಯಾರಿಸುವ ಮೂಲಕ ಬದುಕನ್ನು ಕಂಡುಕೊಳ್ಳುತ್ತಿದ್ದು, ಬ್ಯಾಟ್ ತಯಾರಿಕೆಯೇ ಈ ಬಡ ಕುಟುಂಬದ ಜೀವನಕ್ಕೆ ಆಧಾರವಾಗಿದೆ.
ಇವರು ಕ್ರಿಕೆಟ್ ಬ್ಯಾಟ್ ತಯಾರಿಸಿ ಅತಿ ಕಡಿಮೆ ದರಕ್ಕೆ ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಚಿಕ್ಕ ಮಕ್ಕಳಿಗೆ ಮಾರಾಟ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳಿಗಾಗಿ ಚಿಕ್ಕ ಚಿಕ್ಕ ಬ್ಯಾಟ್‌ಗಳನ್ನು ತಯಾರಿಸುವ ಇವರ ಬಳಿ ವಿಕೆಟ್ ಹಾಗೂ ಬೆಲ್ಸ್‌ಗಳು ಕೂಡ ಸಿಗುತ್ತವೆ.
ಇನ್ನು ಪುರುಷರು ಬ್ಯಾಟ್ ತಯಾರಿಸಿದರೆ ಮಹಿಳೆಯರು ಕೂಡ ವಿಕೆಟ್ಗಳನ್ನು ತಯಾರಿಸುವ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲ, ಬ್ಯಾಟ್ ತಯಾರಾದ ಬಳಿಕ ವಿವಿಧ ಕಂಪನಿಗಳ ಸ್ಟಿಕ್ಕರ್ಗಳನ್ನು ಹಾಕುವ ಮೂಲಕ ಬ್ರಾಂಡ್ ಕಂಪನಿಯರವನ್ನೇ ಇವರು ಆಕರ್ಷಿಸುತ್ತಿದ್ದಾರೆ.
ಇವರ ಅಳಲನ್ನು ಕೇಳೋರಿಲ್ಲ...
ಪ್ರತಿದಿನ ನಮಗೆ ವ್ಯಾಪಾರ ಆಗುತ್ತೆ ಅಂತ ಹೇಳಕ್ಕಾಗಲ್ಲ. ಒಂದೊಂದು ದಿನ ವ್ಯಾಪಾರವೇ ಆಗುವುದಿಲ್ಲ. ಕೆಲವು ದಿನ ನಾವು ಹಾಕಿದ ಬಂಡವಾಳಕ್ಕಿಂತಲೂ ಕಡಿಮೆ ವ್ಯಾಪಾರವಾಗುತ್ತೆ. ಇದರಿಂದ ನಾವು ನಷ್ಟ ಕೂಡ ಅನುಭವಿಸಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಈ ಬ್ಯಾಟ್ ತಯಾರಕರು. ಮಹಾರಾಷ್ಟ್ರದಲ್ಲಿ ನಾವು ತುಂಬಾ ಕಡು ಬಡತನದಲ್ಲಿ ಹುಟ್ಟಿದವರು. ನಮಗೆ ಸರ್ಕಾರ ಮತದಾನದ ಹಕ್ಕನ್ನು ನೀಡಿದೆ. ಆದರೆ ಬದುಕಲು ಒಂದು ಸೂರನ್ನು ಕೂಡ ನಮಗೆ ನೀಡಿಲ್ಲ. ಮಕ್ಕಳನ್ನು ಓದಿಸಲು ಕೂಡ ನಮಗೆ ಸಾಕಷ್ಟು ತೊಂದರೆಯಾಗಿದೆ. ನಮ್ಮ ಗ್ರಾಮದಿಂದ ಸುಮಾರು 15 ಕಿಲೋಮೀಟರ್ ಅಂತರದಲ್ಲಿ ಶಾಲೆ ಇದೆ. ಶಾಲೆಗೆ ಹೋಗಬೇಕಾದರೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಹಳ ತೊಂದರೆಯಾಗುತ್ತಿದೆ ಎಂದು ತಮ್ಮ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.
ಶೋರೂಂಗಳಲ್ಲಿ ಇಂತಹ ಬ್ಯಾಟ್‌ಗಳನ್ನು ಮೂರರಿಂದ ನಾಲ್ಕು ಸಾವಿರ ಕೊಟ್ಟು ಪಡೆಯಬೇಕಾದ ಅನಿವಾರ್ಯತೆ ಇದೆ. ಆದರೆ ಇವರು ಮಾತ್ರ ಕೇವಲ 400 ರೂಪಾಯಿಗೆ ಒಂದು ಬ್ಯಾಟನ್ನು ಮಾರುತ್ತಾರೆ. ಆದರೆ ಗ್ರಾಹಕರು ಮಾತ್ರ, ಈ 400 ರೂಪಾಯಿ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ. ಒಮ್ಮೊಮ್ಮೆ ತಮಗೆ ಮನಬಂದಂತೆ ಬೆಲೆ ನಿಗದಿಪಡಿಸಿ ಬೇಸರ ಉಂಟು ಮಾಡುತ್ತಾರೆ ಎಂಬುದು ಇವರ ಬೇಸರ ವ್ಯಕ್ತಪಡಿಸುತ್ತಾರೆ.
ತಮ್ಮಲ್ಲಿನ ಕಲೆಯನ್ನೇ ಬಂಡವಾಳ ಮಾಡಿಕೊಂಡು ಕ್ರಿಕೆಟ್ ಬ್ಯಾಟ್ ತಯಾರಿಸುವಲ್ಲಿ ಈ ಕುಟುಂಬದವರು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇಂತಹ ಬಡ ಕುಟುಂಬಗಳನ್ನು ಸರ್ಕಾರ ಗುರುತಿಸಿ ಇವರ ಕಲೆಗೆ ಬೆಲೆ ನೀಡಿದರೆ ನಿಜಕ್ಕೂ ಇವರ ಬಾಳು ಬಂಗಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.