ಹಾಸನ : ಚನ್ನಪಟ್ಟಣ ಕೆರೆ ಅಭಿವೃದ್ಧಿ ಹಾಗೂ ಪ್ರವಾಸಿ ಕೇಂದ್ರ ಮಾಡಲು ಹಿಂದಿನ ಸರ್ಕಾರ ಮಾಡಿದ್ದ 144 ಕೋಟಿ ರೂ. ಗಳ ಯೋಜನೆಯ ಹಣದಲ್ಲಿ ಚನ್ನಪಟ್ಟಣ ಕೆರೆ ಸೇರಿ ಆರು ಕೆರೆಗಳು ಹಾಗೂ ಒಂಭತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ನಗರದ ಸಾಲಗಾಮೆ ರಸ್ತೆಯ ರೆಡ್ ಕ್ರಾಸ್ ಭವನದಲ್ಲಿ, ಹಾಸನ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಗೋಷ್ಠಿಯಲ್ಲಿ ಮಾತನಾಡಿ, ಚನ್ನಪಟ್ಟಣ ಕೆರೆಗೆ 35 ಕೋಟಿ ರೂ, ಗವೇನಹಳ್ಳಿ ಕೆರೆಗೆ 6.37 ಕೋಟಿ ರೂ, ಬೂವನಹಳ್ಳಿ ಕೆರೆಗೆ 5.14 ಕೋಟಿ ರೂ, ಸತ್ಯಮಂಗಲ ಕೆರೆಗೆ 12.5 ಕೋಟಿ ರೂ, ಹುಣಸಿನಕೆರೆಗೆ 19.75 ಕೋಟಿ, ಮೀಸಲಿಟ್ಟಿದ್ದು, ಗುಡೇನಹಳ್ಳಿ ಕೆರೆ ಹಾಗು ಮಹಾರಾಜ ಪಾರ್ಕ್, ವಿಜಯನಗರ, ಹೊಯ್ಸಳ ನಗರ, ಹುಣಸಿನಕೆರೆ ಬಡಾವಣೆಯ ಅಬ್ದುಲ್‌ಕಲಾಂ ಉದ್ಯಾನವನ ಸೇರಿದಂತೆ ಗಂಧದ ಕೋಠಿ, ಹೇಮಾವತಿನಗರ, ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.
ಇದೇ ವೇಳೆ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳು, ಪಿಪಿಟಿ ಮೂಲಕ ವಿವಿಧ ಕೆರೆಗಳು ಹಾಗು ಉದ್ಯಾನವನಗಳಿಗೆ ರೂಪಿಸಿರುವ ಯೋಜನೆಗಳನ್ನು ವಿವರಿಸಿದರು. ಕೆರೆ ಮತ್ತು ಉದ್ಯಾನವನಗಳಿಗೆ ಬೇಲಿ ನಿರ್ಮಾಣ, ವಾಕಿಂಗ್ ಪಾತ್, ಯೋಗ ಕೇಂದ್ರ, ವಾಲಿಬಾಲ್ ಕೋರ್ಟ್‌ಗಳು, ಸ್ಕೇಟಿಂಗ್ ಪಾರ್ಕ್, ಹುಣಸಿನಕೆರೆಯಲ್ಲಿ ಬೋಟಿಂಗ್ ಮತ್ತಿತರ ಸೌಲಭ್ಯಗಳ ನಿರ್ಮಾಣದ ಕುರಿತು ಮಾಹಿತಿ ನೀಡಿದರು.