ಹಾಸನ/ಅರಸೀಕೆರೆ: ನಮ್ಮ ದೇಶದಲ್ಲಿ ಕಾರ್ಮಿಕರಿಲ್ಲದೆ ಮಾನವ ಜೀವನ ಶೈಲಿ ಬದಲಾಗದು. ಆದ್ದರಿಂದ ಈ ಸಮಾಜದಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯ ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆಯ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಬಂದ ಹಿನ್ನೆಲೆಯಲ್ಲಿ ಇವತ್ತು ಹೊರ ರಾಜ್ಯದಿಂದ ಬಂದ ಕಾರ್ಮಿಕರು ವಾಪಸ್ ತಮ್ಮ ತಮ್ಮ ರಾಜ್ಯಕ್ಕೆ ಹೋಗಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಅವರಂತೆ ನಮ್ಮ ರಾಜ್ಯದ ಜನ ಕೆಲಸ ಮಾಡುವುದಿಲ್ಲ. ಇವತ್ತು ಅಭಿವೃದ್ಧಿಯಲ್ಲಿ ನಾವು ಹಿಂದುಳಿಯುತ್ತಿದ್ದೇವೆ. ಹಾಗಾಗಿ ಪ್ರತಿಯೊಂದಕ್ಕೂ ಕಾರ್ಮಿಕರ ಅವಶ್ಯಕತೆ ಬಹಳ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ ಅಧ್ಯಕ್ಷ ಹೇಮಂತ್ ಆರ್. ಮರಿಗೌಡ ಮಾತನಾಡಿ, ಮಾತಿಗಿಂತ ಕೃತಿ ಲೇಸು. ನಮ್ಮ ನಾಡಿನಲ್ಲಿ ದುಡಿಯುವ ಕಾರ್ಮಿಕರ ಕುಂದು ಕೊರತೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಯಾವಾಗಲೂ ಸ್ಪಂದಿಸುವ ಕೆಲಸ ಮಾಡುತ್ತೇನೆ. ಹಾಗೆಯೇ ಕಳೆದ ಐದು ವರ್ಷಗಳಿಂದ ನಮ್ಮ ಸಂಘಟನೆ ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಗ್ರಾಮಾಂತರ ಪ್ರದೇಶದ ತಾಲೂಕಿನಲ್ಲಿ ಸಹ ಘಟಕ ಸ್ಥಾಪನೆಗೆ ಒತ್ತು ನೀಡುತ್ತಿದ್ದು, ಇಂದು ಅರಸೀಕೆರೆಯಲ್ಲಿ ಪ್ರಾರಂಭವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್, ರೋಟರಿ ಅರುಣ್, ಪತ್ರಕರ್ತ ಸಂಘದ ಅಧ್ಯಕ್ಷ ಕಣಕಟ್ಟೆ ಕುಮಾರ್, ಅಟೋ ಚಾಲಕರ ಸಂಘದ ಅಧ್ಯಕ್ಷ ಬಾಲರಾಜ್, ಸದಸ್ಯರುಗಳಾದ ಅವಿನಾಶ್, ಶರತ್ ಸೇರಿದಂತೆ ಇನ್ನಿತರರಿದ್ದರು.