ಹಾಸನ : ಹಾಸನ ಜಿಲ್ಲೆ ಮಹಿಳಾ ಲೇಖಕಿಯರ ಗಟ್ಟಿತನ ಸಂದೇಶವುಳ್ಳ ಸಾಹಿತ್ಯದ ಕೊಡುಗೆ ಅಪಾರವಾಗಿರುವ ಜಿಲ್ಲೆಯೆಂದು ಲೇಖಕಿ ಲೀಲಾವತಿ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೇಖಕಿ ಲೀಲಾವತಿ, ಎಲ್ಲಾ ಪ್ರತಿಕೂಲ ಮಾತ್ರವಲ್ಲದೇ ಪ್ರವಾಹದ ವಿರುದ್ಧ ಈಜುವ ಪ್ರಕ್ರಿಯೆಯನ್ನು ಸಾಹಿತ್ಯ ಲೋಕದಲ್ಲಿ ನಡೆಯುತ್ತದೆಯೆಂದು ಅಭಿಪ್ರಾಯಪಟ್ಟರು. ಮನೆಯಲ್ಲಿ ಸಂಸಾರದ ಜವಾಬ್ದಾರಿ ಮಾತ್ರವಲ್ಲದೇ, ಸಮಯವಿಲ್ಲದಿದ್ದರೂ ಹಾಸನ ಜಿಲ್ಲೆಯ ಲೇಖಕಿಯರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆಂದರು.
ಒಮ್ಮೆ ಹೆಣ್ಣಾಗು ಪ್ರಭುವೇ ಎಂಬ ನಾಟಕವನ್ನು ಹಿರಿಯ ಸಾಹಿತಿ ಭಾನು ಮುಷ್ತಾಕ್ ಬರೆದಿದ್ದು, ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿತು. ಹಾಗೂ ಬೆಂಕಿನ ಮಳೆ ಕಥೆ ಕೂಡ ಪ್ರಸಿದ್ಧವಾಯಿತು. ಶೈಲಜ ಹಾಸನರವರ ಕಾದಂಬರಿ ಕೂಡ ಜೀವಂತ ಘಟನೆಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಯಿತು. ಹಾಸನದ ಲೇಖಕಿಯರಿಂದ ರಚಿತವಾದ ಅನೇಕ ಕಥೆ, ಸಾಹಿತ್ಯಕ್ಕೆ ವಿವಿಧ ಪ್ರಶಸ್ತಿಗಳು ಲಭಿಸಿದ್ದು, ಇಂತಹ ಗಟ್ಟಿತನದ ಸಾಹಿತ್ಯದ ಸೃಷ್ಠಿಗಳು ಹಾಸನ ಜಿಲ್ಲೆಯ ಲೇಖಕಿಯರಿಂದ ಹೊರ ಬಂದಿದೆಯೆನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಹಾಗೂ ಇಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಅಪಾರವಾಗಿದೆಯೆಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದರವರ ಕೃತಿ ಬಾಲಸೌರಭ ಮಕ್ಕಳ ಕವನ ಸಂಕಲವನ್ನು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚ.ನಾ. ಅಶೋಕ್ ಬಿಡುಗಡೆ ಮಾಡಿದರು. ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿಯನ್ನು ದೀಪ್ತಿ ಭದ್ರಾವತಿಯವರಿಗೆ, ಲೀಲಾವತಿ ಪ್ರಧಾನ ಮಾಡಿದರು. ದಿ. ಬಂದಮ್ಮ ಸಿದ್ದರಾಮಯ್ಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಸುಶೀಲಾ ಸೋಮಶೇಖರ್, ಶೈಲಾಜಾ ಹಾಸನ್, ಭಾರತಿ ಹಾದಿಗೆರವರಿಗೆ ಸಮಾಜ ಸೇವಕ ಡಾ. ವೈ.ಎಸ್. ವೀರಭದ್ರಪ್ಪ ಅವರಿಗೆ ನೀಡಿ ಗೌರವಿಸಿದರು.