ಹಾಸನ: ಜಿಲ್ಲಾ ಬಿಜೆಪಿ ಮತ್ತು ಜೆಡಿಎಸ್ ಪಾಳೆಯದಲ್ಲಿ ಗಂಡಸ್ತನದ ಬಗ್ಗೆ ಮಾತಿನ ಸಮರ ಜೋರಾಗಿ ನಡೆಯುತ್ತಿದೆ. ಶಾಸಕ ಶಿವಲಿಂಗೇಗೌಡ ಮತ್ತು ಬಿಜೆಪಿಯ ಮುಖಂಡರ ನಡುವೆ ಪತ್ರಿಕಾಗೋಷ್ಠಿಗಳ ಮೂಲಕ ವಾಕ್ಸಮರ ಶುರುವಾಗಿದ್ದು, ಗಂಡಸ್ತನದ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಜಿಲ್ಲೆಯ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ಅಭಿವೃದ್ಧಿ ಕೆಲಸಗಳಿಗೆ ಪ್ರತಿ ಬಾರಿಯೂ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ನ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆರೋಪಿಸಿದ್ರು. ನನ್ನ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿಲ್ಲಲು ಯಾರು ಗಂಡಸರಿಲ್ಲ. ಹಾಗಾಗಿ ಬೇರೆ ಕ್ಷೇತ್ರದಿಂದ ಗಂಡಸರನ್ನು ಕರೆದುಕೊಂಡು ಬಂದು ನಿಲ್ಲಿಸುತ್ತಾರೆ ಎಂಬ ಮಾತುಗಳನ್ನು ಆಡುವ ಮೂಲಕ ಬಿಜೆಪಿ ಪಕ್ಷದ ವಿರುದ್ಧ ಗುಡುಗಿದರು.
ಇವರ ಮಾತಿಗೆ ಪತ್ರಿಕಾಗೋಷ್ಠಿ ಮೂಲಕವೇ ಜಿಲ್ಲಾ ಬಿಜೆಪಿ ಮಹಿಳಾ ಯುವ ಮೋರ್ಚಾ ಸದಸ್ಯರು ಪ್ರತಿಕ್ರಿಯಿಸಿದ್ದು, ನಿಮ್ಮನ್ನು ಸೋಲುವುದಕ್ಕೆ ಗಂಡಸರು ಬೇಕಿಲ್ಲ ಕಣ್ರೀ. ನಾವೇ ಸಾಕು ಎನ್ನುವ ಮೂಲಕ ಟಾಂಗ್ ಕೊಟ್ಟು ಸವಾಲ್ ಹಾಕಿದ್ರು.
ಅಲ್ಲದೇ ಜಿವಿಟಿ ಬಸವರಾಜ್ ಸಹ ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದರು. ಮಂಡ್ಯ ಚನ್ನಪಟ್ಟಣ ಹಾಗೂ ತುಮಕೂರಲ್ಲಿ ಯಾರು ಗಂಡಸರೇ ಇಲ್ಲ ಅಂತಾ ಅವರ ಕುಟುಂಬದವರನ್ನು ನಿಲ್ಲಿಸಿದ್ರಾ?. ಎನ್ನುವ ಮೂಲಕ ದೇವೇಗೌಡರ ಕುಟುಂಬದ ವಿರುದ್ಧ ಧ್ವನಿಯೆತ್ತಿದ್ದಾರೆ. ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವವರು ಹದ್ದು ಮೀರಿ ವರ್ತನೆ ತೋರುವುದು ಒಳ್ಳೆಯ ಬೆಳವಣಿಗೆಯಲ್ಲ. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ಅದನ್ನು ಸರಿಪಡಿಸಿಕೊಳ್ಳಿ. ಈ ಬಾರಿಯ ಚುನಾವಣೆಯಲ್ಲಿ ನಾವು ನಮ್ಮ ತಾಕತ್ತು ಏನು ಎಂಬುದನ್ನ ತೋರಿಸುತ್ತೇವೆಂದ್ರು.
ನಾವು ಅಕ್ರಮ ಚಟುವಟಿಕೆ ಮತ್ತು ಅಕ್ರಮ ಕಾಮಗಾರಿಗಳ ವಿರುದ್ಧ ಧ್ವನಿಯೆತ್ತಿದ್ದೇವೆಯೇ ಹೊರತು, ಅಭಿವೃದ್ಧಿ ವಿಚಾರದಲ್ಲಿ ಯಾರೂ ಕೂಡ ತೊಂದರೆ ನೀಡಿಲ್ಲ. ತಾವು ಕಂಟ್ರಾಕ್ಟರ್ ಮೂಲಕ ಯಾವ ಯಾವ ಅಕ್ರಮಗಳನ್ನು ಎಸಗಿ ರಾಜಕೀಯವಾಗಿ ಬಲಾಡ್ಯರಾಗಿದ್ದೀರಿ ಎಂಬುದು ಗೊತ್ತು. ಈಗ ಎಲ್ಲದಕ್ಕೂ ಸಮಯ ಬಂದಿದೆ. ಇವರ ವರ್ತನೆಗಳಿಗೆ ಸದ್ಯದಲ್ಲೇ ಇತಿಶ್ರೀ ಹಾಡುತ್ತೇವೆ ಎಂದು ಸವಾಲು ಹಾಕಿದ್ರು.