ಹಾಸನ: ಚುನಾವಣಾ ತರಬೇತಿ ಪಡೆಯುವಾಗ ಚೆನ್ನಾಗಿದ್ದ ಶಿಕ್ಷಕ, ತರಬೇತಿ ಪಡೆದ ಬಳಿಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ತನಗೆ ಕೊಟ್ಟ ಕರ್ತವ್ಯವನ್ನ ಸಂಪೂರ್ಣ ಮಾಡಲೇಬೇಕು ಎಂದು ಕೊಂಡ ಅವರು ಚಿಕಿತ್ಸೆಗೆ ಒಳಗಾಗಿದ್ದರೂ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಾಂಡು ಕುಮಾರ್ ಅವರನ್ನು ಸಾಲಗಾಮೆ ಗ್ರಾಮ ಪಂಚಾಯಿತಿಯ ಚುನಾವಣೆಗೆ ನಿಯೋಜನೆ ಮಾಡಲಾಗಿತ್ತು. ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ತರಬೇತಿಗೂ ಇವರು ಹಾಜರಾಗಿದ್ದರು. ಆದರೆ ತರಬೇತಿ ಪಡೆದ 3-4 ದಿನಗಳ ಬಳಿಕ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತಕ್ಕೊಳಗಾಗಿದ್ದು, ತಲೆಯ ಭಾಗಕ್ಕೆ ಮತ್ತು ಕೈ-ಕಾಲುಗಳಿಗೆ ಗಂಭೀರವಾಗಿ ಗಾಯವಾಗಿತ್ತು. ಚಿಕಿತ್ಸೆ ಪಡೆದು ಗುಣಮುಖವಾಗುವ ಮುನ್ನವೇ ಕರ್ತವ್ಯ ಲೋಪವಾಗಬಾರದೆಂಬ ಉದ್ದೇಶದಿಂದ ಚುನಾವಣಾ ಕಾರ್ಯಕ್ಕೆ ಹಾಜರಾಗಿದ್ದಾರೆ.
ಓದಿ: ಹಾಸನ: ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ 62 ಅಭ್ಯರ್ಥಿಗಳ ಅವಿರೋಧ ಆಯ್ಕೆ
ರಜೆ ನೀಡಲಿಲ್ಲ: ಅಪಘಾತವಾಗಿದೆ ಎಂಬ ವಿಚಾರವನ್ನ ಚುನಾವಣಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ರು. ತರಬೇತಿ ಪಡೆದಿರುವುದರಿಂದ ಮತ್ತೊಬ್ಬರಿಗೆ ತುರ್ತು ಪರಿಸ್ಥಿತಿಯಲ್ಲಿ ತರಬೇತಿ ನೀಡಲು ಸಾಧ್ಯವಿಲ್ಲ. ಹಾಗಾಗಿ ನೀವೇ ಚುನಾವಣೆಯ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದ್ದರು. ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಾಂಡು ಕುಮಾರ್ ಆಸ್ಪತ್ರೆಯಿಂದ ನೇರವಾಗಿ ಮಗನ ಸಹಾಯ ಪಡೆದು ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ.