ಹಾಸನ: ಸಹ ಶಾಲಾ ಶಿಕ್ಷಕನೋರ್ವ ಮುಖ್ಯ ಶಿಕ್ಷಕ ಹುದ್ದೆಗೆ ಅರ್ಹರಾಗಿದ್ದರೂ ದಲಿತ ಎಂಬ ಒಂದೇ ಒಂದು ಕಾರಣಕ್ಕೆ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಆರೋಪ ಮಾಡಿರುವ ವ್ಯಕ್ತಿ ನಿವಾಸದ ಎದುರು ತಮಟೆ ಚಳವಳಿ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಸಿ. ರಾಜೇಶ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಕಲಗೂಡು ಕೇರಳಾಪುರದ ಶ್ರೀ ವಿದ್ಯಾಗಣಪತಿ ಪ್ರೌಢಶಾಲೆಗೆ 1990 ರಲ್ಲಿ ಆರೋಪಿ ಕೃಷ್ಣ ಕರ್ತವ್ಯಕ್ಕೆ ನೇಮಕವಾಗಿದ್ದರು. ನಂತರ ಶಾಲೆಯ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯುವ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಇನ್ನಿತರೆ ಸಹ ಶಿಕ್ಷಕರು ಇದೇ ಶಾಲೆಯ ಡಿ ಗ್ರುಪ್ ಮಹಿಳೆವೋರ್ವಳಿಗೆ ಶಿಕ್ಷಕ ಕೃಷ್ಣ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ. ಅಲ್ಲದೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ದೂರಿದರು.
ಅಲ್ಲದೇ ಸೇವೆಯಿಂದ ಅಮಾನತು ಮಾಡಿದ ನಂತರ ಸಾಮಾಜಿಕ ಹಾಗೂ ಮಾನಸಿಕವಾಗಿ ನಾನು ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಆರೋಪ ಹೊರಿಸಿದ ನಂತರ ಸಮಾಜ ನನ್ನನ್ನು ಕೆಟ್ಟ ದೃಷ್ಠಿಯಿಂದ ನೋಡುತ್ತಿದೆ. ಇದಕ್ಕೆಲ್ಲ ಕಾರಣರಾದವರಿಗೆ ಶಿಕ್ಷೆ ನೀಡಬೇಕು. ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು ಎಂದು ನೊಂದ ಶಿಕ್ಷಕ ಕೃಷ್ಣ ಒತ್ತಾಯಿಸಿದರು.