ಸಕಲೇಶಪುರ: ಆಲೂರು ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ತಾಲ್ಲೂಕು ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಕೇಂದ್ರದಲ್ಲಿ ಒಳ ಚರಂಡಿ ವ್ಯವಸ್ಥೆ, ಮಂಗಳೂರು- ಬೆಂಗಳೂರು ರೈಲು ನಿಲುಗಡೆ, ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ, ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ವಾಟೆಹೊಳೆ ಜಲಾಶಯದಿಂದ ಪೈಪ್ ಲೈನ್ ಮಾಡುವುದು, ರೈತರಿಗೆ ಬೆಳೆ ಪರಿಹಾರ, ಎತ್ತಿನಹೊಳೆ ಯೋಜನೆಗೊಳಪಟ್ಟ ರೈತರಿಗೆ ಪರಿಹಾರ ಕಲ್ಪಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅರಿವಾಗಿದೆ ಎಂದರು.
ನಂತರ ಮಾತನಾಡಿದ ಅವರು, ಎರಡು ದಿನಗಳಲ್ಲಿ ಅರಣ್ಯ, ನೀರಾವರಿ ಸಚಿವರೊಂದಿಗೆ ಮಾತನಾಡಿ ಸೆ. 20 ರೊಳಗೆ ಸಚಿವರೊಡಗೂಡಿ ತಾಲ್ಲೂಕಿನಲ್ಲಿ ಸಭೆ ನಡೆಸಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲಾ ಪಂಚಾಯಿತಿಗೊಳಪಡುವ ಕಾಮಗಾರಿಗಳನ್ನು ಒಂದು ವಾರದಲ್ಲಿ ಮುಗಿಸಬೇಕು. ರೈಲು ನಿಲುಗಡೆ ಕೋರಿ ಅರ್ಜಿ ಪಡೆದು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಎಂದರು.
ಇದೇ ವೇಳೆ, ತಾಲ್ಲೂಕು ಕೇಂದ್ರದಲ್ಲಿ ರೈಲು ನಿಲುಗಡೆಯಾಗುತ್ತಿಲ್ಲ. ಮುಸುಕಿನ ಜೋಳಕ್ಕೆ ಒಂದು ಗುಂಟೆಗೆ ಕೇವಲ 68. ರೂ. ನೀಡುತ್ತಿರುವುದು ಅವೈಜ್ಞಾನಿಕವಾಗಿರುವುದರಿಂದ ಎಕರೆಗೆ ಕನಿಷ್ಠ 20 ಸಾವಿರ ಹಣ ನೀಡಬೇಕು. ರಾಷ್ಟೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಲ್ಲದೆ ಗುಣಮಟ್ಟ ಕಾಮಗಾರಿ ನಡೆಯುತ್ತಿಲ್ಲ. 2018-19 ರಿಂದ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಯಾವುದೇ ಯೋಜನೆ ಬಿಡುಗಡೆಯಾಗಿಲ್ಲ. ತಾ. ಆಸ್ಪತ್ರೆಗೆ ಇಸಿಜಿ ಯಂತ್ರ ಬೇಕು ಎಂದು ಶಾಸಕ ಹೆಚ್. ಕೆ. ಕುಮಾರಸ್ವಾಮಿ ಸಚಿವರಿಗೆ ಮನವಿ ಸಲ್ಲಿಸಿದರು.
ಒಂದು ವರ್ಷದಿಂದ ತಲೆದೋರಿರುವ ಅಗಸರಹಟ್ಟಿ ಕೆರೆ ಒಡೆದಿರುವುದನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮದ ಮುಖಂಡ ಉದಯರವಿ ಮತ್ತು ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು. ಸಚಿವರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.