ಹಾಸನ: ನಾವು ಗಣ್ಯರ ಕಾರ್ಯಕ್ರಮದಲ್ಲಿ ಕೇವಲ ಭಾಷಣವನ್ನು ಮಾಡುತ್ತೇವೆ ಹೊರತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಫಸ್ಟ್ಕ್ಲಾಸ್ ಪಡೆದಿರುವ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನಂತರ ಮಾತನಾಡಿದ ಅವರು, ಕ್ರಿಸ್ತಪೂರ್ವದಲ್ಲಿ ಬಡವ ಬಲ್ಲಿದರ ನಡುವೆ ಅಂತರವಿತ್ತು. ಸಮಾಜದಲ್ಲಿ ಕಷ್ಟಕರವಾದ ಜೀವನ ನಡೆಸುತ್ತಿದ್ದರು. ಆ ಸಮಯದಲ್ಲಿ ಆಸೆಯೇ ದುಃಖಕ್ಕೆ ಮೂಲ ಎಂದು ಎಲ್ಲವನ್ನು ತ್ಯಜಿಸಿದ ಸಿದ್ದಾರ್ಥ ಬುದ್ಧನಾಗಿ ಪ್ರಪಂಚಕ್ಕೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದರು.
ಅದೇ ರೀತಿಯಾಗಿ ನಮ್ಮ ಬಸವಣ್ಣನವರು 12 ನೇ ಶತಮಾನದಲ್ಲಿ ಕಾಯಕಕ್ಕೆ ಹೆಚ್ಚಿನ ಗೌರವ ನೀಡುವ ಮೂಲಕ ಕಾಯಕವೇ ಕೈಲಾಸ ಎಂಬ ನಾಣ್ಣುಡಿಗೆ ಕಾರಣರಾದವರು. ಪ್ರಪಂಚದ ಮೊಟ್ಟ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ ಎಂದು ಕರೆಯುತ್ತೇವೆ. ಎಲ್ಲಾ ತರದ ಎಲ್ಲಾ ವರ್ಗದ ಜನರಿಗೆ ಅವಕಾಶವನ್ನು ಮಾಡಿಕೊಟ್ಟು ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟರು. ಅಂದೇ ಅಂತರ ಜಾತೀಯ ವಿವಾಹ, ಸಮಾಜದಲ್ಲಿ ಐಕ್ಯತೆ ಮನೋಭಾವ ಮೂಡಿಸುವಲ್ಲಿ ಅವರ ಪಾತ್ರ ದೊಡ್ಡದು. ಆದರೆ ಅವರ ಗೌರವ, ಸಿದ್ದಾಂತಗಳಿಗೆ ಮಾರು ಹೋದ ಜನರು ಇಂದು ಕೇವಲ ಅವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾ, ಅವರು ಕೊಟ್ಟಂತ ಸಿದ್ದಾಂತಗಳಿಗೆ ತಿಲಾಂಜಲಿ ಇಟ್ಟು ಅಗೌರವವಾಗಿ ನಡೆದುಕೊಳ್ಳುತ್ತಿರುವುದು ವಿಷಾಧನೀಯ ಎಂದರು.