ಸಕಲೇಶಪುರ: ಕೊರೊನಾ ಕರ್ಫ್ಯೂ ಹೇರಿದ್ದರೂ ಗ್ರಾಹಕರನ್ನು ಮನೆಗೆ ಕರೆಸಿಕೊಂಡು ಬಟ್ಟೆ ವ್ಯಾಪಾರ ಮಾಡುತ್ತಿದ್ದ ವರ್ತಕನೊಬ್ಬನ ಮನೆಗೆ ತಹಶೀಲ್ದಾರ್ ಎಚ್.ಬಿ ಜಯಕುಮಾರ್ ನೇತೃತ್ವದ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಲಂಕಾರ್ ಬಟ್ಟೆಯ ಅಂಗಡಿಯ ಮಾಲೀಕರ ಮೇಲೆ ಕೋವಿಡ್ ನಿರ್ಬಂಧ ಮೀರಿ ವ್ಯಾಪಾರ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಮುಖ್ಯ ರಸ್ತೆಯಲ್ಲಿರುವ ಅಂಗಡಿಯನ್ನು ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದು, ಇದರಿಂದಾಗಿ ಅಶೋಕ ರಸ್ತೆಯಲ್ಲಿರುವ ತನ್ನ ಮನೆಗೆ ದೂರವಾಣಿ ಮುಖಾಂತರ ಗ್ರಾಹಕರನ್ನು ಕರೆಸಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಗುಂಪು ಗುಂಪಾಗಿ ಬಟ್ಟೆ ಖರೀದಿಗೆ ಈತನ ಮನೆಗೆ ಬರುತ್ತಿದ್ದು, ಇದು ಬಡಾವಣೆಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೋವಿಡ್ ಸಮಯದಲ್ಲಿ ಗುಂಪು ಗುಂಪಾಗಿ ಬಟ್ಟೆ ಖರೀದಿಗೆ ಜನ ಬರುತ್ತಿರುವುದನ್ನು ತಹಶೀಲ್ದಾರ್ ಜಯ್ ಕುಮಾರ್ ಅವರಿಗೆ ತಿಳಿಸಿದ ಹಿನ್ನೆಲೆ ಇಂದು ದಾಳಿ ನಡೆಸಿ ಮನೆಯಲ್ಲಿ ಬಟ್ಟೆ ಖರೀದಿಗೆ ಮುಂದಾಗಿದ್ದವರನ್ನು ಸ್ಥಳದಿಂದ ಓಡಿಸಿ ಮಾಲೀಕನ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ತಹಶೀಲ್ದಾರ್ ಜಯಕುಮಾರ್, ಅಲಂಕಾರ್ ಬಟ್ಟೆ ಅಂಗಡಿಯವರು ಅಶೋಕ ರಸ್ತೆಯಲ್ಲಿರುವ ಮನೆಯಲ್ಲಿ ಬಟ್ಟೆ ಮಾರುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಸುಮಾರು 12ಕ್ಕೂ ಹೆಚ್ಚು ಮಂದಿ ಬಟ್ಟೆ ಖರೀದಿ ಮಾಡಲು ಬಂದಿರುವುದು ಕಂಡು ಬಂದಿದೆ. ಕೊರೊನಾ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲೂ ಜನ ಮನೆಯಲ್ಲಿರದೇ ಬಟ್ಟೆ ಖರೀದಿ ಮಾಡಲು ಬರುತ್ತಿರುವುದು ಸರಿಯಲ್ಲ, ಜೊತೆಗೆ ಸಣ್ಣ ಮಕ್ಕಳನ್ನು ಸಹ ಬಟ್ಟೆ ಖರೀದಿಗೆ ಕರೆದುಕೊಂಡು ಬಂದಿದ್ದಾರೆ. ದೊಡ್ಡವರು ಮಾಡುವ ತಪ್ಪಿಗೆ ಮಕ್ಕಳು ವಿನಾಕಾರಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.
ಕೊರೊನಾ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆಯಾಗುವವರೆಗೂ ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದ್ರು. ಈ ವೇಳೆ ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ, ಕಂದಾಯ ನಿರೀಕ್ಷಕ ಸುರೇಶ್,ಪ್ರವೀಣ್ , ಗ್ರಾಮ ಲೆಕ್ಕಿಗ ಸಿದ್ದಲಿಂಗು, ಮಹೇಶ್ ಮುಂತಾದವರು ಹಾಜರಿದ್ದರು.