ಹಾಸನ: ಅಂಚೆ ಇಲಾಖೆಯಲ್ಲಿ ಖಾತೆ ತೆರೆದರೆ ಕೇಂದ್ರ ಸರ್ಕಾರ 10 ಸಾವಿರ ರೂ. ವಿದ್ಯಾರ್ಥಿ ವೇತನ ನೀಡುತ್ತದೆ ಎಂಬ ವದಂತಿ ಹಿನ್ನೆಲೆ ಪ್ರಥಮ ಪಿಯುಸಿ, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಖಾತೆ ತೆರೆಯಲು ಅಂಚೆ ಇಲಾಖೆಗೆ ಮುಗಿಬಿದ್ದಿದ್ದಾರೆ.
ವಿದ್ಯಾರ್ಥಿಗಳಿಗೆ ಯಾವ ಮೂಲದಿಂದ ಮಾಹಿತಿ ದೊರೆಯಿದೆಯೋ ಗೊತ್ತಿಲ್ಲ. ತರಗತಿಗಳಿಗೆ ತೆರಳದೇ ಖಾತೆ ತೆರೆಯಲು ಅಂಚೆ ಕಚೇರಿ ಬಳಿ ಅಲೆಯುತ್ತಿದ್ದ ದೃಶ್ಯ ಕಂಡುಬಂದಿತು. ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಗಿಬೀಳುತ್ತಿರುವ ಕಾರಣ ಸಾರ್ವಜನಿಕರು, ಇಲಾಖೆ ಸಿಬ್ಬಂದಿ ಒಳಗೆ ತೆರಳಲು ಹರಸಾಹಸ ಪಡುವಂತಾಯಿತು. ಜಿಲ್ಲಾ ಕೇಂದ್ರ ಹಾಸನದ ಅಂಚೆ ಪ್ರಧಾನ ಕಚೇರಿಯಲ್ಲಿ ಈವರೆಗೆ 4 ಸಾವಿರಕ್ಕಿಂತ ಹೆಚ್ಚು ಸ್ಕಾಲರ್ಶಿಪ್ ಅಕೌಂಟ್ ತೆರೆಯಲಾಗಿದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಅಕೌಂಟ್ ತೆರೆಯುವುದಕ್ಕೆ ಬೆಳಗ್ಗೆ 7 ಗಂಟೆಯಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಇನ್ನು ವಿದ್ಯಾರ್ಥಿ ವೇತನ 10 ಸಾವಿರ ರೂ. ನೀಡುವ ಬಗ್ಗೆ ಯಾವುದೇ ಮಾಹಿತಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿಲ್ಲ. ಆದರೆ ವಿದ್ಯಾರ್ಥಿಗಳು ಮಾತ್ರ 10 ಸಾವಿರ ರೂ. ಆಸೆಯಿಂದ ಖಾತೆ ತೆರೆಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಧ್ವನಿವರ್ಧಕದ ಮೂಲಕ ಶಾಂತವಾಗಿರಿ, ಒಂದು ಖಾತೆ ತೆರೆಯಲು ಕನಿಷ್ಠ ಹತ್ತು ನಿಮಿಷ ಬೇಕು. ಸಹಕರಿಸಿ ಎಂದು ಮನವಿ ಮಾಡಲಾಗುತ್ತಿದೆ ಅಂತ ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಬದ್ರಿನಾಥ್ ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಪ್ರಧಾನ ಅಂಚೆ ಕಚೇರಿ ಅಷ್ಟೇ ಅಲ್ಲದೆ, ಜಿಲ್ಲೆಯ 56 ಉಪ ಅಂಚೆ ಕಚೇರಿ ಹಾಗೂ 250 ಶಾಖೆಗಳಲ್ಲಿ ಖಾತೆ ತೆರೆದಿದ್ದಾರೆ. ಆಧಾರ್ ಜೊತೆ 100 ರೂ. ಪಾವತಿಸಿದರೆ ಸಾಕು ಖಾತೆ ತೆರೆಯಲು ಅವಕಾಶ ಇರುವ ಕಾರಣ 10,000 ರೂ. ವಿದ್ಯಾರ್ಥಿ ವೇತನದ ಆಸೆಯಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಆದ್ರೆ ಖಾತೆ ತೆರೆದರೆ 10 ಸಾವಿರ ರೂ. ಬರುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.