ಹಾಸನ : ಕಾಲೇಜಿನ ಪಾರ್ಕಿಂಗ್ ಸ್ಥಳದಲ್ಲಿ ವಿದ್ಯಾರ್ಥಿಗಳು ನಿಲ್ಲಿಸಿದ್ದ ಬೈಕ್ ಚಕ್ರಗಳ ಗಾಳಿ ತೆಗೆದಿದ್ದಲ್ಲದೆ, ವಿದ್ಯಾರ್ಥಿಗಳ ಮೇಲೆ ಪ್ರಾಧ್ಯಾಪಕರೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣ ನಗರದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ನಡೆದಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಇಂದು ಸರ್ಕಾರಿ ಕಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆದರೂ ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಿಸಲು ಕಾಲೇಜು ಬಳಿ ಬಂದು, ಎಂದಿನಂತೆ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು ಎನ್ನಲಾಗಿದೆ. ನಂತರ ತಾವು ನಿಲ್ಲಿಸಿದ್ದ ಬೈಕ್ಗಳ ಬಳಿ ಬಂದಾಗ ಬೈಕ್ ಚಕ್ರಗಳಲ್ಲಿದ್ದ ಗಾಳಿಯನ್ನು ಯಾರೂ ತೆಗೆದಿದ್ದಾರೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ.
ಸ್ಥಳದಲ್ಲಿಯೇ ಇದ್ದ ಪ್ರಾಧ್ಯಾಪಕರಿಗೆ ಈ ಮಾತು ಕೇಳಿಸಿ ಕೋಪಗೊಂಡು, ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಮತ್ತಿಬ್ಬರು ವಿದ್ಯಾರ್ಥಿಗಳು ಇದನ್ನು ಪ್ರಶ್ನಿಸಿದಾಗ ಸ್ಥಳಕ್ಕಾಗಮಿಸಿದ ಪ್ರಾಂಶುಪಾಲ ರಾಜಪ್ಪ ಮತ್ತು ದೈಹಿಕ ಶಿಕ್ಷಕ ಮಹೇಂದ್ರಪ್ಪ, ಸತ್ಯಮೂರ್ತಿ ಹಾಗೂ ಗಿರೀಶ್ ಎಂಬುವರು ಚಂದ್ರಶೇಖರ್ ಎಂಬ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಇಷ್ಟೆಲ್ಲಾ ನಡೆಯುತ್ತಿರುವಾಗ ಸ್ಥಳದಲ್ಲಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾರೆ. ಇಂತಹ ವರ್ತನೆ ತೋರಿದ ಪ್ರಾಧ್ಯಾಪಕರ ವಿರುದ್ಧ ದೂರು ನೀಡಲು ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.