ಹಾಸನ : ಲ್ಯಾಪ್ ಟಾಪ್ ವಿತರಣೆಯಲ್ಲಿ ಪ್ರಾಂಶುಪಾಲರು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ಮಾಡಿದ ಘಟನೆ ಬೇಲೂರು ತಾಲೂಕಿನಲ್ಲಿ ನಡೆಯಿತು.
ಬೇಲೂರು ಪಟ್ಟಣದ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರ ನೀಡಿರುವ ಲ್ಯಾಪ್ ಟಾಪ್ ಅನ್ನು ಕೆಲವರಿಗೆ ಮಾತ್ರ ನೀಡಿದ್ದು, ಕೆಲವರಿಗೆ ನೀಡದೇ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಲ್ಯಾಪ್ ಟಾಪ್ ವಂಚಿತ ವಿದ್ಯಾರ್ಥಿಗಳು ಕಾಲೇಜು ಗೇಟ್ ಹಾಕಿ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.
ಕೇವಲ ಲ್ಯಾಪ್ ಟಾಪ್ ಮಾತ್ರವಲ್ಲದೇ ನಮ್ಮ ಕಾಲೇಜಿಗೆ ಯಾವುದೇ ಮೂಲ ಸೌಕರ್ಯಕ್ಕೆ ಅನುದಾನ ಬರುತ್ತಿಲ್ಲ. ಅದೇ ರೀತಿಯಾಗಿ ಶೌಚಾಲಯ, ಗ್ರಂಥಾಲಯ, ಬಸ್ ಸೌಕರ್ಯವಿಲ್ಲದೇ ಸಂಪೂರ್ಣವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಲಿಂಗೇಶ್ ವಿದ್ಯಾರ್ಥಿಗಳ ಸಮಸ್ಯೆಗಳನ್ನ ಆಲಿಸಿದ್ರು. ಬಳಿಕ ಮಾತನಾಡಿದ, ಪ್ರಾಂಶುಪಾಲರು ತಾರತಮ್ಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಾಗೇನಾದರೂ ಮಾಡಿದ್ದರೆ ತನಿಖೆ ಮಾಡಿಸುತ್ತೇನೆ. ಈಗ ಕಾಲೇಜಿಗೆ ಬಂದಿರುವಂತಹ ಲ್ಯಾಪ್ ಟ್ಯಾಪ್ ಗಳನ್ನು ವಿತರಣೆ ಮಾಡಿದ್ದು, ಉಳಿದವರಿಗೆ ತನಿಖೆ ಬಳಿಕ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ರು.