ಹಾಸನ : ಹಸುಗೂಸಿನ ಮೃತದೇಹವನ್ನು ಬೀದಿ ನಾಯಿಗಳು ಎಳೆದಾಡಿಕೊಂಡು ತಿಂದಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ನಗರದ ಹೊಸ ಬಸ್ ನಿಲ್ದಾಣದ ಬಳಿ ಕೆಲ ಆಟೋ ಚಾಲಕರು ಬೀದಿನಾಯಿಯೊಂದು ಏನೋ ಹೊತ್ತೊಯ್ಯುತ್ತಿದೆ ಎಂಬುದನ್ನು ಗಮನಿಸಿದ್ದಾರೆ.
ಪುಟ್ಟ ಮಗುವಿನ ಕಾಲಿನಂತೆ ಕಂಡಿದ್ದರಿಂದ ಹಿಂಬಾಲಿಸಿದ್ದಾರೆ. ಯಾವುದೋ ಪ್ರಾಣಿ ಇರಬೇಕು ಎಂದುಕೊಂಡವರಿಗೆ ಹತ್ತಿರ ಹೋಗಿ ನೋಡಿದಾಗ ಕಂದಮ್ಮನ ಮೃತದೇಹ ಪತ್ತೆಯಾಗಿದೆ.
ತಕ್ಷಣ ಜನರು ನಾಯಿಯಿಂದ ಮೃತದೇಹವನ್ನು ಬಿಡಿಸಿದ್ದಾರೆ. ಅಷ್ಟರಲ್ಲೇ ಮಗುವಿನ ಕೆಲ ಭಾಗಗಳನ್ನು ನಾಯಿಗಳು ತಿಂದು ಹಾಕಿದ್ದವು. ಮಗುವಿನ ಕರುಳ ಬಳ್ಳಿಗೆ ಆಸ್ಪತ್ರೆಯಲ್ಲಿ ಹಾಕಿರುವ ಕ್ಲಿಪ್ ಕೂಡ ಹಾಗೇ ಇತ್ತು. ಇದನ್ನು ಗಮನಿಸಿದಾಗ ಯಾವುದೋ ಆಸ್ಪತ್ರೆಯಲ್ಲಿ ಹುಟ್ಟಿದ ಗಂಡು ಮಗುವನ್ನು ಹೆತ್ತವರು ಬಿಸಾಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಮಗುವಿನ ಮೃತದೇಹವನ್ನು ನಾಯಿಯಿಂದ ರಕ್ಷಣೆ ಮಾಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಹಾಸನದ ಬಡಾವಣೆ ಠಾಣೆ ಪೊಲೀಸರು, ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 8425 ಮಂದಿಗೆ ಕೋವಿಡ್ : 47 ಸೋಂಕಿತರ ಸಾವು