ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ-2019 ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ಯುವಕ-ಯುವತಿಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಶಕ್ತರಾಗಲು ಇದೊಂದು ಸುವರ್ಣ ಅವಕಾಶ. ನಿಮ್ಮ ಮನೆ ಬಾಗಿಲಿಗೆ ಬಂದು ಸರ್ಕಾರ ನಿಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ನೀಡಲು ಮುಂದಾಗಿದೆ. ಇಲ್ಲಿ ತರಬೇತಿ ನೀಡಿದ ನಂತರ ನೇಮಕಾತಿ ಮಾಡಿಕೊಳ್ಳುವ ಭರವಸೆ ಸಿಗಲಿದೆ. ಸೂಕ್ತ ವಿದ್ಯಾರ್ಹತೆ ಹೊಂದಿರುವವರು ತಕ್ಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಸಂದರ್ಶನದಲ್ಲಿ ಆಯ್ಕೆಯಾಗದವರ ಹೆಸರನ್ನು ಪಟ್ಟಿಯಲ್ಲಿ ಇಟ್ಟಿಕೊಂಡಿರಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಮುಂದೆ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಿದರು.
ಇನ್ನು, ಮೇಳದಲ್ಲಿ ಫಾರ್ಮಸಿ ಸಹಾಯಕ ಹುದ್ದೆ, ಹಾಸ್ಪಿಟಲ್ ಆಪರೇಷನ್ ಎಕ್ಸಿಕ್ಯೂಟಿವ್, ಟಿಯಾರಾ, ಅನಸ್ತೇಷಿಯಾ ಟೆಕ್ನಿಷಿಯನ್, ಡ್ಯೂಟಿ ಮ್ಯಾನೇಜರ್, ಹಾಸ್ಪಿಟಲ್ ನರ್ಸ್ ಫಾರ್ ಅಡ್ವಾನ್ಸಡ್ ಕೇರ್, ಕ್ರಿಟಿಕಲ್ ಕೇರ್ ಸಹಾಯಕ ಜನರಲ್ ಐಸಿಯು ಹಾಗೂ ಕಾರ್ಡಿಯಾಕ್ ಕೇರ್ ಟೆಕ್ನಿಷಿಯನ್ ಪ್ರೋಗ್ರಾಮ್ ಇತರೆ ಹುದ್ದೆಗಳಿಗೆ ತರಬೇತಿ ನೀಡುವ ಕುಶಲತೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಯಿತು.